ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಅವರ ಪ್ರಯಾಣ ಎರಡು ಗಂಟೆಗಳ ಕಾಲ ವಿಳಂಬಗೊಂಡಿದೆ.
ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಯಾಣ ವಿಳಂಬವಾಗಲಿದ್ದು, ಬೊಮ್ಮಾಯಿ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿಯೇ ವಿಶ್ರಾಂತಿ ಕೊಠಡಿಯಲ್ಲಿ ಕಾಯುತ್ತಿದ್ದಾರೆ.
ಇಂದು, ಮಂಗಳವಾರ ಹುಬ್ಬಳ್ಳಿಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆ ನಡೆಯುತ್ತಿದ್ದು, ಅದರಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಗೆ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು.
ಬೆಳಿಗ್ಗೆ 8:45ಕ್ಕೆ ಟೇಕ್ ಆಫ್ ಆಗಿ ಬೆಳಿಗ್ಗೆ 9:45ಕ್ಕೆ ಹುಬ್ಬಳ್ಳಿಗೆ ಆಗಮಿಸಬೇಕಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ವಿಮಾನಕ್ಕೆ ಸದ್ಯಕ್ಕೆ ಹಾರಲು ಕ್ಲಿಯರನ್ಸ್ ಸಿಕ್ಕಿಲ್ಲ. ಎರಡು ಗಂಟೆ ತಡವಾಗುವ ಸಾಧ್ಯತೆಯಿದೆ.
ಎರಡು ವಾರಗಳ ಹಿಂದೆ ಹುಬ್ಬಳ್ಳಿಯಲ್ಲಿ ದಟ್ಟ ಮೋಡಗಳ ಕಾರಣ, ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇದ್ದ ವಿಮಾನ ಅರ್ಧ ಗಂಟೆ ಕಾಲ ಆಗಸದಲ್ಲಿಯೇ ರೌಂಡ್ಸ್ ಹೊಡೆದಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ