ಬೆಳಗಾವಿ: ವಿಶ್ವಗುರು ಬಸವಣ್ಣನವರ ವಚನಾಂಕಿತ ಕೂಡಲ ಸಂಗಮದೇವ ಎಂಬುದನ್ನು ಬಸವಧರ್ಮ ಪೀಠಾಧ್ಯಕ್ಷರಾಗಿದ್ದ ಪೂಜ್ಯಶ್ರೀ ಮಾತೆ ಮಹಾದೇವಿಯವರು ‘ಲಿಂಗದೇವ’ ಎಂದು ಬದಲಿಸಿರುವುದಕ್ಕೆ ಲಿಂಗಾಯತ ಸಮಾಜದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆದರೆ ಈಗಿನ ಬಸವಧರ್ಮಪೀಠದ ಅಧ್ಯಕ್ಷರಾದ ಪೂಜ್ಯಶ್ರೀ ಡಾ. ಗಂಗಾಮಾತಾಜಿಯವರು ‘ಲಿಂಗದೇವ’ ಬದಲಿಗೆ ಕೂಡಲಸಂಗಮದೇವ ಎಂದೇ ಬಳಸಬೇಕೆಂದು ಸಂದೇಶ ನೀಡಿದ್ದಾರೆ. ಇದರಿಂದ ಸಮಸ್ತ ಲಿಂಗಾಯತರಿಗೆ ಸಂತಸ ಉಂಟಾಗಿದೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಉಚ್ಚನ್ಯಾಯಾಲಯ ಹಾಗು ಸರ್ವೋಚ್ಛ ನ್ಯಾಯಾಲಯಗಳು ಕೂಡ ವಚನಾಂಕಿತ ‘ಕೂಡಲಸಂಗಮದೇವ’ ಎಂದೇ ಇರಬೇಕೆಂದು ಆದೇಶಿಸಿದ್ದವು. ಈಗ ಬಸವಧರ್ಮಪೀಠದ ಅಧ್ಯಕ್ಷರಾದ ಪೂಜ್ಯಶ್ರೀ ಡಾ. ಗಂಗಾಮಾತಾಜಿಯವರ ಈ ನಿರ್ಧಾರದಿಂದ ಬಸವಪರ ಸಂಘಟನೆಗಳಲ್ಲಿದ್ದ ಬಿರುಕು ಮಾಯವಾಗಿದೆ. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಯನ್ನು ತಂದುಕೊಳ್ಳಲು, ಲಿಂಗಾಯತರ ಅಸ್ಮಿತೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಈ ಸಂದರ್ಭದಲ್ಲಿ ಪೂಜ್ಯಶ್ರೀ ಡಾ. ಗಂಗಾಮಾತಾಜಿ ಅವರ ಈ ಸಂದೇಶವು ಲಿಂಗಾಯತರ ನೈತಿಕ ಬೆಂಬಲವನ್ನು ಹೆಚ್ಚಿಸಿದೆ. ನಮಗೆ ಅತ್ಯಂತ ಸಂತೋಷವಾಗಿದೆ ಎಂದು ಗದಗ-ಡಂಬಳ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಪೂಜ್ಯಶ್ರೀ ಡಾ. ಗಂಗಾಮಾತಾಜಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಶ್ರೀಗಳು ಈ ಮಹತ್ವದ ತೀರ್ಮಾನಕ್ಕಾಗಿ ಅವರಿಗೆ ಕೃತಜ್ಞತೆಗಳನ್ನು ತಿಳಿಸುವುದಲ್ಲದೆ ಲಿಂಗಾಯತ ಪರ ಸಂಘಟನೆಗಳಿಗೆ ತಮ್ಮ ಈ ಹೇಳಿಕೆಯಿಂದ ಅಭೂತಪೂರ್ವ ಬಲ ಬಂದಂತಾಗಿದೆ ಎಂದು ಹೇಳಿದ್ದಾರೆ. ಕೆಲವರು ತಮ್ಮ ನಿಲುವನ್ನು ವಿರೋಧಿಸಬಹುದಾಗಿದ್ದರೂ ತಾವು ಯಾವುದಕ್ಕೂ ಹೆದರಬೇಕಿಲ್ಲ. ಬಸವ ಮತ್ತು ಲಿಂಗಾಯತ ಪರ ಮಠಾಧೀಶರೆಲ್ಲರೂ ತಮಗೆ ಬೆಂಗಾವಲಾಗಿ ನಿಲ್ಲುತ್ತಾರೆ. ಅವರೆಲ್ಲರ ಬೆಂಬಲ ಸದಾ ತಮ್ಮೊಂದಿಗಿದೆ. ತಮ್ಮ ಸಂಕೀರ್ಣ ಸಂದರ್ಭದಲ್ಲಿ ಸಾಮರಸ್ಯದ ನಿಲುವು ಸರ್ವತ್ರ ಪ್ರಶಂಸನೀಯವಾಗಿದೆ ಎಂದು ಶ್ರೀಗಳು ದೂರವಾಣಿ ಮೂಲಕ ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ