ಮಂಗಳೂರು: ನಗರದ ಮಾರ್ನಮಿಕಟ್ಟೆಯ ಕೊರಗಜ್ಜನ ಗುಡಿಯ ಎದುರು ಉಪಯೋಗಿಸಿದ ಕಾಂಡೋಮ್ ನ್ನು ಇಟ್ಟು ಅಪವಿತ್ರಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮೂಲತಃ ಹುಬ್ಬಳ್ಳಿಯವನಾದ ಪ್ರಸ್ತುತ ಕೋಟೆಕಾರು ಮುಂಡಾಣ ಎಂಬಲ್ಲಿ ವಾಸವಾಗಿರುವ ದೇವದಾಸ್ ದೇಸಾಯಿ (62) ಎಂಬವರೇ ಬಂಧಿತ ಆರೋಪಿ. ಆರೋಪಿ ದೇವದಾಸ್ ತಂದೆ ಜಾನ್ ದೇಸಾಯಿ, ಸರಕಾರಿ ಉದ್ಯೋಗಿಯಾಗಿದ್ದು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಈತ ಕೂಡ ಅದೇ ಧರ್ಮ ಅನುಸರಣೆ ಮಾಡುತ್ತಿದ್ದ. ಹೆಚ್ಚಾಗಿ ಮನೆಯಲ್ಲೆ ಪ್ರಾರ್ಥನೆ ಮಾಡುತ್ತಿದ್ದ ಎಂದು ನಗರ ಪೊಲೀಸ್ ಕಮಿಷನರ್ ಎನ್ .ಶಶಿಕುಮಾರ್ ತಿಳಿಸಿದ್ದಾರೆ.
ವಿವಿಧ ದೈವಸ್ಥಾನ, ಕೊರಗಜ್ಜ ಕಟ್ಟೆ, ಮಸೀದಿ, ಗುರುದ್ವಾರಗಳ ಕಾಣಿಕೆ ಡಬ್ಬಿಯಲ್ಲಿ ಕಾಂಡೋಮ್, ಭಿತ್ತಿಪತ್ರ, ಏಸುವಿನ ಕುರಿತಾದ ಲೇಖನ ಹಾಕಿರುವುದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.
ಮಾರ್ನಮಿಕಟ್ಟೆ ಕೊರಗಜ್ಜ ಕಟ್ಟೆ,ಬಾಬುಗುಡ್ಡೆ ಕೊರಗಜ್ಜನ ಕಾಣಿಕೆ ಡಬ್ಬಿ, ಕೊಂಡಾಣ ದೈವಸ್ಥಾನ, ಮಂಗಳಾದೇವಿ ದೇವಸ್ಥಾನ, ಕದ್ರಿ ದೇವಸ್ಥಾನದ ಬಳಿಯಲ್ಲಿರುವ ರಿಕ್ಷಾ ಪಾರ್ಕ್ ನ ಬಳಿ ಕಾಣಿಕೆ ಡಬ್ಬಿ, ಕಲ್ಲುರ್ಟಿ ದೈವಸ್ಥಾನ, ಒಮೆಗಾ ಆಸ್ಪತ್ರೆ ಬಳಿ, ಪಂಪ್ ವೆಲ್ ಬಳಿ, ಉಳ್ಳಾಲದ ದರ್ಗಾ ಬಳಿಯ ಮಸೀದಿಯ ಕಾಣಿಕೆ ಡಬ್ಬಿ, ಕಲ್ಲಾಫು ನಾಗನ ಕಟ್ಟೆ , ಕೊಟ್ಟಾರ ಚೌಕಿಯ ಕಲ್ಲುರ್ಟಿ ದೈವಸ್ಥಾನ, ಉರ್ವಾ ಮಾರಿಗುಡಿ ದೇವಸ್ಥಾನದ ಕಾಣಿಕೆ ಡಬ್ಬಿ, ಕುತ್ತಾರು ಕೊರಗಜ್ಜನ ಕಟ್ಟೆ, ಕುಡುಪು ದೈವಸ್ಥಾನ, ಉಳ್ಳಾಲದ ಕೊರಗಜ್ಜನ ಕಾಣಿಕೆ ಡಬ್ಬಿ, ನಂದಿಗುಡ್ಡೆಯ ಕೊರಗಜ್ಜನ ಗುಡಿ, ಎ ಬಿ ಶೆಟ್ಟಿ ವೃತ್ತದ ಬಳಿಯ ದರ್ಗಾ, ಸಿಖ್ ಗುರುದ್ವಾರ ಗುಡಿ- ಬಂಗ್ರ ಕೂಳೂರು, ಶ್ರೀ ಬಬ್ಬು ಸ್ವಾಮಿ ದೈವಸ್ಥಾನ- ಮಂಕಿಸ್ವಾಂಡ್, ಆದಿ ಮಾಹೇಶ್ವರಿ ದೈವಸ್ಥಾನ ಭಜನಾ ಮಂಡಳಿ ಕಾಣಿಕೆ ಡಬ್ಬಿ- ಜೆಪ್ಪು ಮಹಾಕಾಳಿ ಪಡ್ಪು ಮುಂತಾದ ಕಡೆ ಕೃತ್ಯ ಎಸಗಿರುವುದಾಗಿ ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ.


ನಿಮ್ಮ ಕಾಮೆಂಟ್ ಬರೆಯಿರಿ