ರಾಯಚೂರು: ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣ ಪಂಚಾಯತದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೇವಲ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಜಿಲ್ಲೆಯ ಸಿರವಾರ ಪಟ್ಟಣದ 5ನೇ ವಾರ್ಡ್ ಮಹಿಳಾ ಅಭ್ಯರ್ಥಿ ಲಕ್ಷ್ಮಿ ಆದೆಪ್ಪ ಅವರೇ ಕೇವಲ ಒಂದೇ ಮತದಿಂದ ಗೆಲುವು ಸಾಧಿಸಿದವರು. ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಶೈಲಜಾ ಉಮಾಶಂಕರ ಕುಲಕರ್ಣಿ ಒಂದೇ ಒಂದು ಮತದಿಂದ ಸೋಲನುಭವಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಲಕ್ಷ್ಮಿ ಆದೆಪ್ಪ 249, ಶೈಲಜಾ ಉಮಾಶಂಕರ 248, ಜೆಡಿಎಸ್ ಅಭ್ಯರ್ಥಿ ಲಕ್ಷ್ಮಿ ಉಮಾಪತಿ-12, ಪಕ್ಷೇತರ ಅಭ್ಯರ್ಥಿ ಅಂಜಲಿ ಹನುಮಂತ-5 ಮತ ಪಡೆದುಕೊಂಡಿದ್ದರೆ, ನೋಟಾಕ್ಕೆ 3 ಮತಗಳು ಬಿದ್ದಿವೆ. ವಾರ್ಡ್‌ನಲ್ಲಿ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ನಡುವೆ ತೀವ್ರ ಸೆಣಸಾಟ ಏರ್ಪಟ್ಟಿತ್ತು. ಮಅಂತಿಮವಾಗಿ ಬಿಜೆಪಿ ಅಭ್ಯರ್ಥಿ ಒಂದು ಮತದಿಂದ ಅಚ್ಚರಿಯ ಗೆಲುವು ಪಡೆದಿದ್ದಾರೆ.
ಜಿಲ್ಲೆಯಲ್ಲಿ ನಡೆದ ಮೂರು ಪಟ್ಟಣ ಪಂಚಾಯತಗಳಿಗೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಬಹುಮತ ಸಾಧಿಸಿದ್ದಾರೆ. ಈ ಮೂಲಕ ಸ್ಥಳೀಯ ಸಂಸ್ಥೆಗಳ ಅಧಿಕಾರ ಹಿಡಿಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.
ಸಿಂಧನೂರು ತಾಲೂಕಿನ ತುರುವಿಹಾಳ ಪಟ್ಟಣ ಪಂಚಾಯತದ ಒಟ್ಟು 14 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್-9, ಬಿಜೆಪಿ-2 ಹಾಗೂ ಮೂವರು ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ತುರುವಿಹಾಳ ಕಾಂಗ್ರೆಸ್ನ ಹಾಲಿ ಶಾಸಕ ಬಸನಗೌಡ ತುರುವಿಹಾಳ ಸ್ವಕ್ಷೇತ್ರವಾಗಿದ್ದು, ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ತಮ್ಮ ಕ್ಷೇತ್ರದಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ಸು ಕಂಡಿದ್ದಾರೆ. ಸಿರವಾರ ಪಟ್ಟಣ ಪಂಚಾಯತದ ಒಟ್ಟು 20 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್-9, ಬಿಜೆಪಿ-6, ಜೆಡಿಎಸ್-3 ಹಾಗೂ ಪಕ್ಷೇತರ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಸಿರವಾರ ತಾಲೂಕಿನ ಕವಿತಾಳ ಪಟ್ಟಣ ಪಂಚಾಯತದಲ್ಲಿ ಒಟ್ಟು 16 ಸ್ಥಾನಗಳ ಪೈಕಿ ಕಾಂಗ್ರೆಸ್-8, ಬಿಜೆಪಿ-4, ಜೆಡಿಎಸ್-3 ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಗೆಲುವು ಪಡೆದಿದ್ದಾರೆ. ಕ್ಷೇತ್ರದ ಹಾಲಿ ಜೆಡಿಎಸ್ ಶಾಸಕ ರಾಜಾ ವೆಂಕಟಪ್ಪ ನಾಯಕರಿಗೆ ಮುಖಭಂಗವಾಗಿದೆ
ಮಸ್ಕಿ ಪುರಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಒಟ್ಟು 23 ಸ್ಥಾನಗಳಲ್ಲಿ, ಬಿಜೆಪಿ-14, ಕಾಂಗ್ರೆಸ್-9 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮಸ್ಕಿ ತಾಲೂಕಿನ ಬಳಗಾನೂರು ಪಟ್ಟಣ ಪಂಚಾಯತದ ಒಟ್ಟು 12 ಸ್ಥಾನಗಳ ಪೈಕಿ ಕಾಂಗ್ರೆಸ್-5, ಬಿಜೆಪಿ-6, ಪಕ್ಷೇತರ-1 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ