ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧರ್ಮಗುರು ಕಾಳಿಚರಣ್ ಮಹಾರಾಜ್‌ ಬಂಧನ

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದಕ್ಕಾಗಿ ಮತ್ತು ರಾಷ್ಟ್ರಪಿತನನ್ನು ಕೊಂದ ನಾಥೂರಾಂ ಗೋಡ್ಸೆಯನ್ನು ಹೊಗಳಿದ್ದಕ್ಕಾಗಿ ರಾಯ್‌ಪುರ ಪೊಲೀಸರು ಕಾಳಿಚರಣ್ ಮಹಾರಾಜ್ ಅವರನ್ನು ಬಂಧಿಸಿದ್ದಾರೆ. ಅವರನ್ನು ಖಜುರಾಹೊದಲ್ಲಿ ಬಂಧಿಸಲಾಯಿತು.
ಕಾಳಿಚರಣ್ ಮಹಾರಾಜ್ ಮಧ್ಯಪ್ರದೇಶದ ಖಜುರಾಹೊದಿಂದ 25 ಕಿ.ಮೀ ದೂರದ ಬಾಗೇಶ್ವರ ಧಾಮ್ ಬಳಿ ಬಾಡಿಗೆ ವಸತಿಗೃಹದಲ್ಲಿ ವಾಸವಿದ್ದರು. ರಾಯ್‌ಪುರ ಪೊಲೀಸರು ಇಂದು, ಗುರುವಾರ ಮುಂಜಾನೆ 4 ಗಂಟೆಗೆ ಬಂಧಿಸಿದ್ದಾರೆ. ಸಂಜೆ ವೇಳೆಗೆ ಪೊಲೀಸ್ ತಂಡವು ಆರೋಪಿಗಳೊಂದಿಗೆ ರಾಯ್‌ಪುರ ತಲುಪಲಿದೆ ಎಂದು‌ ರಾಯ್ಪುರ್ ಎಸ್‌ಪಿ ಪ್ರಶಾಂತ್ ಅಗರ್ವಾಲ್ ಹೇಳಿದ್ದಾರೆ.
ರಾಯ್‌ಪುರದ ಮಾಜಿ ಮೇಯರ್ ಪ್ರಮೋದ್ ದುಬೆ ಅವರ ದೂರಿನ ಮೇರೆಗೆ ರಾಯ್‌ಪುರದ ತಿಕ್ರಪಾರಾ ಪೊಲೀಸ್ ಠಾಣೆಯಲ್ಲಿ ಕಾಳಿಚರಣ್ ಮಹಾರಾಜ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಕಾಳಿಚರಣ್ ವಿರುದ್ಧ ಐಪಿಸಿಯ ಸೆಕ್ಷನ್ 505(2) [ವರ್ಗಗಳ ನಡುವೆ ದ್ವೇಷ ಸೃಷ್ಟಿಸುವ ಅಥವಾ ಪ್ರಚಾರ ಮಾಡುವ ಹೇಳಿಕೆಗಳು] ಮತ್ತು ಸೆಕ್ಷನ್ 294 [ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಕೃತ್ಯ] ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಭಾನುವಾರ, ರಾಯ್‌ಪುರದ ರಾವಣ ಭಟ ಮೈದಾನದಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ಮಾತನಾಡಿದ ಕಾಳಿಚರಣ್ ಮಹಾರಾಜ್, “ರಾಜಕೀಯದ ಮೂಲಕ ರಾಷ್ಟ್ರವನ್ನು ವಶಪಡಿಸಿಕೊಳ್ಳುವುದು ಇಸ್ಲಾಂನ ಗುರಿಯಾಗಿದೆ” ಎಂದು ಆರೋಪಿಸಿದರು.
ಗಾಂಧಿಯನ್ನು ಕೊಂದ ನಾಥೂರಾಂ ಗೋಡ್ಸೆಗೆ ನಾನು ನಮಸ್ಕರಿಸುತ್ತೇನೆ ಎಂದು ಅವರು ಹೇಳಿದರು.
ಹರಿದ್ವಾರದಲ್ಲಿ ನಡೆದ ಧಾರ್ಮಿಕ ಸಭೆಯೊಂದು ಸಮಾರಂಭದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಹಿಂದೂ ಧಾರ್ಮಿಕ ಮುಖಂಡರು ಮಾಡಿದ ಪ್ರಚೋದನಕಾರಿ ಮತ್ತು ಕೋಮುವಾದಿ ಭಾಷಣಗಳು ಹೆಡ್‌ಲೈನ್ಸ್‌ ಮಾಡಿದ ಕೆಲವೇ ದಿನಗಳಲ್ಲಿ ಕಾಳಿಚರಣ್ ಮಹಾರಾಜ್ ಅವರು ರಾಯ್‌ಪುರ ಧರ್ಮ ಸಂಸದ್‌ನಲ್ಲಿ ಹೇಳಿಕೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿದ್ದಕ್ಕೆ ವಿರೋಧ : ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ ಪಕ್ಷದ ರಾಷ್ಟ್ರೀಯ ವಕ್ತಾರೆ ರಾಧಿಕಾ ಖೇರಾ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement