ಹರಿಯಾಣ: ಭಿವಾನಿ ಗಣಿಯಲ್ಲಿ ಭೂಕುಸಿತ: 4 ಸಾವು, ಡಜನ್‌ಗೂ ಹೆಚ್ಚು ಮಂದಿ ಸಿಲುಕಿರುವ ಶಂಕೆ

ಭಿವಾನಿ: ಹರಿಯಾಣದ ಭಿವಾನಿ ಜಿಲ್ಲೆಯ ದಾದಾಮ್ ಗಣಿಗಾರಿಕೆ ವಲಯದಲ್ಲಿ ಶನಿವಾರ ಸಂಭವಿಸಿದ ಭೂಕುಸಿತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.   ಸುಮಾರು 15 ರಿಂದ 20 ಮಂದಿ ಮಣ್ಣಿನಡಿ ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಗಣಿಗಾರಿಕೆಯಲ್ಲಿ ತೊಡಗಿದ್ದ ಸುಮಾರು 12 ವಾಹನಗಳು ಭೂಕುಸಿತದಲ್ಲಿ ಹೂತು ಹೋಗಿವೆ. ರಕ್ಷಣಾ ಕಾರ್ಯ ಮುಂದುವರಿದಿದ್ದು, ಪೊಲೀಸರು ಸ್ಥಳದಲ್ಲಿದ್ದಾರೆ.
ಇದುವರೆಗೆ ಮೂವರನ್ನು ರಕ್ಷಿಸಲಾಗಿದ್ದು,  ಮೃತದೇಹಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಕೃಷಿ ಸಚಿವ ಜೆ.ಪಿ. ದಲಾಲ್ ಮತ್ತು ಎಸ್ಪಿ ಅಜಿತ್ ಸಿಂಗ್ ಶೇಖಾವತ್ ಅವರು ಪರಿಹಾರ ಕಾರ್ಯಗಳ ಮೇಲ್ವಿಚಾರಣೆಗಾಗಿ ಘಟನಾ ಸ್ಥಳದಲ್ಲಿದ್ದಾರೆ.

ಕೆಲವರು ಮೃತಪಟ್ಟಿದ್ದಾರೆ. ಸದ್ಯಕ್ಕೆ ನಿಖರವಾದ ಅಂಕಿಅಂಶಗಳನ್ನು ನೀಡಲು ಸಾಧ್ಯವಿಲ್ಲ. ವೈದ್ಯರ ತಂಡ ಆಗಮಿಸಿದೆ. ಸಾಧ್ಯವಾದಷ್ಟು ಜನರನ್ನು ಉಳಿಸಲು ನಾವು ಪ್ರಯತ್ನಿಸುತ್ತೇವೆ. ಭೂಕುಸಿತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ತನಿಖೆ ನಡೆಯುತ್ತಿದೆ. ಎಂದು ಸಚಿವ ದಲಾಲ್ ಹೇಳಿದರು.
ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಟ್ವಿಟರ್‌ನಲ್ಲಿ ದುರ್ಘಟನೆಗೆ ದುಃಖವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಅವರು ಪರಿಸ್ಥಿತಿಯನ್ನು ಗಮನಿಸುತ್ತಿರುವುದಾಗಿ ತಿಳಿಸಿದ್ದಾರೆ.

ಭಿವಾನಿಯಲ್ಲಿರುವ ಖಾನಕ್ ಮತ್ತು ದಾದಾಮ್ ಬೆಟ್ಟಗಳಲ್ಲಿ ದೊಡ್ಡ ಪ್ರಮಾಣದ ಗಣಿಗಾರಿಕೆ ಕಾರ್ಯಾಚರಣೆಗಳನ್ನು ನಡೆಸಲಾಗುತ್ತದೆ. ಎರಡು ತಿಂಗಳ ಹಿಂದೆ, ಹೆಚ್ಚುತ್ತಿರುವ ಮಾಲಿನ್ಯದ ಮಟ್ಟದಿಂದ ಗಣಿಗಾರಿಕೆ ಕೆಲಸವನ್ನು ನಿಷೇಧಿಸಲಾಯಿತು.
ಗುರುವಾರ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಪ್ರದೇಶದಲ್ಲಿ ಗಣಿಗಾರಿಕೆ ಕಾರ್ಯಾಚರಣೆಯನ್ನು ಪುನರಾರಂಭಿಸಲು ಅನುಮತಿ ನೀಡಿತು ಮತ್ತು ಮರುದಿನ ಕೆಲಸ ಪ್ರಾರಂಭವಾಗಿತ್ತು.
ಎರಡು ತಿಂಗಳಿನಿಂದ ಗಣಿಗಳನ್ನು ಮುಚ್ಚಿದ್ದರಿಂದ ಕಟ್ಟಡ ನಿರ್ಮಾಣ ಸಾಮಗ್ರಿಗಳ ಕೊರತೆ ಉಂಟಾಗಿದೆ. ಈ ಕೊರತೆಯನ್ನು ನೀಗಿಸುವ ಸಲುವಾಗಿ ಸ್ಫೋಟಗಳನ್ನು ನಡೆಸಲಾಯಿತು, ಇದು ಭೂಕುಸಿತವನ್ನು ಪ್ರಚೋದಿಸಿತು ಎಂದು ಊಹಿಸಲಾಗಿದೆ.

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement