
ಬೆಂಗಳೂರು: ಇದು ಕೋವಿಡ್ ಕರ್ಫ್ಯೂ ಅಲ್ಲ, ಇದು ಬಿಜೆಪಿ ಕರ್ಫ್ಯೂ, ಬಿಜೆಪಿ ಲಾಕ್‌ಡೌನ್ ಎಂದು ರಾಜ್ಯ ಸರ್ಕಾರದ ವಿರದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಮೇಲಿನ ದ್ವೇಷಕ್ಕಾಗಿ ಬಿಜೆಪಿ ಸರ್ಕಾರ ರಾಜಕೀಯ ಕರ್ಫ್ಯೂ ಜಾರಿಗೊಳಿಸಿ ಜನಸಾಮಾನ್ಯರ ಮೇಲೆ ಗದಾಪ್ರಹಾರ ನಡೆಸುತ್ತಿದೆ ಎಂದು ಆರೋಪಿಸಿದರು.
ವಾರಾಂತ್ಯ ಕರ್ಫ್ಯೂ ಹಾಗೂ ಸಭೆ ಸಮಾರಂಭಗಳಿಗೆ ನಿರ್ಬಂಧ ವಿಧಿಸಿದ್ದರ ಬಗ್ಗೆ ಮಾತನಾಡಿದ ಅವರು, ಬಿಜೆಪಿಗೆ ಜನರ ಪ್ರಾಣ ಅಲ್ಲ, ಅವರಿಗೆ ರಾಜಕಾರಣ ಮುಖ್ಯ, ಪಕ್ಷ ರಾಜಕೀಯ ಮುಖ್ಯ ಎಂದು ಟೀಕಿಸಿದರು.
ಮೊದಲ ಅಲೆಯಲ್ಲಿ ಸ್ವಿಮ್ಮಿಂಗ್ ಪೂಲ್‌ಗೆ ಇಳಿದಿದದ್ದ ನಾಯಕರ ಮೇಲೆ ಕೇಸ್ ದಾಖಲಿಸಲಿ. ಜನಾಶೀರ್ವಾದ ಯಾತ್ರೆ ಮಾಡಿದವರ ಮೇಲೆ ಕೇಸ್ ಹಾಕಲಿ. ಅಂದು ಮದುವೆಯಲ್ಲಿ ಭಾಗಿಯಾಗಿದ್ದ ಮಾಜಿ ಮುಖ್ಯಮಂತ್ರಿಗಳ ಮೇಲೆ ಕೇಸ್ ದಾಖಲಿಸಲಿ ಎಂದು ಅವರು ಸವಾಲು ಹಾಕಿದರು.
ಕಾಂಗ್ರೆಸ್ ರೈತರ ಬದುಕಿಗಾಗಿ, ಬೆಂಗಳೂರಿನ ನಾಗರಿಕರ ಕುಡಿಯುವ ನೀರಿಗಾಗಿಪಾದಯಾತ್ರೆ ನಡೆಸುತ್ತಿದೆ. ಕಾವೇರಿ ನೀರು ಬೆಂಗಳೂರು ಜನರಿಗೆ ಸಿಗಬೇಕು ಎಂಬ ಉದ್ದೇಶದಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಸಮಾವೇಶ, ಪ್ರತಿಭಟನೆ ಮಾಡಬೇಡಿ ಎಂದು ಹೇಳಿದ್ದಾರೆ. ನಾವು ಸಮಾವೇಶ ಮಾಡುತ್ತಿಲ್ಲ, ಬದಲಿಗೆ ಕುಡಿಯುವ ನೀರಿಗಾಗಿ ನಡೆಯಲಿದ್ದೇವೆ. ಹೀಗಾಗಿ ಪಾದಯಾತ್ರೆಯಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.



ನಿಮ್ಮ ಕಾಮೆಂಟ್ ಬರೆಯಿರಿ