ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನ ಚಾಲನಾ ತರಬೇತಿ ಕೇಂದ್ರ ಆರಂಭಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ: ಸಚಿವ ಜೋಶಿ

ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ ವಿಮಾನ ಚಾಲನಾ ತರಬೇತಿ ಕೇಂದ್ರ ಆರಂಭಿಸಲು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಮುಂದಾಗಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು ಖಾತೆ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವಿಮಾನ ಚಾಲನಾ ತರಬೇತಿ ಕೇಂದ್ರ ಸ್ಥಾಪನೆಯಿಂದ ರಾಜ್ಯದ ಎರಡನೇ ರಾಜಧಾನಿಯಾಗಿ ಹೊರಹೊಮ್ಮುತ್ತಿರುವ ಹುಬ್ಬಳ್ಳಿಗೆ ಮತ್ತೊಂದು ಹಿರಿಮೆ ದೊರೆಯಲಿದೆ. ದೇಶದಲ್ಲಿ ವಿಮಾನ ಚಾಲನೆ ಮಾಡುವ ಪೈಲಟ್‌ಗಳ ಕೊರತೆ ನೀಗಿಸಲು ಆರು ವಿಮಾನ ತರಬೇತಿ ಸಂಸ್ಥೆಗಳನ್ನು ದೇಶಾದ್ಯಂತ ಕೇಂದ್ರ ಸರ್ಕಾರ ಸ್ಥಾಪಿಸುತ್ತಿದೆ. ಉತ್ತರ ಕರ್ನಾಟಕದಲ್ಲಿ ಯಾವುದೇ ವೈಮಾನಿಕ ಶಾಲೆಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಖ್ಯಾತಿ ಪಡೆದ ಹುಬ್ಬಳ್ಳಿಯಲ್ಲಿ ಈ ತರಬೇತಿ ಕೇಂದ್ರ ತಲೆ ಎತ್ತಲಿದೆ ಎಂದು ಹೇಳಿದ್ದಾರೆ.
ಈ ಹಿಂದಿನ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ಹಾಗೂ ಈಗಿನ ವಿಮಾನ ಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರೊಂದಿಗೆ ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನ ಚಾಲನಾ ತರಬೇತಿ ಕೇಂದ್ರ ಸ್ಥಾಪಿಸಲು ಒತ್ತಾಯ ಮಾಡಿದ್ದು, ನನ್ನ ಬೇಡಿಕೆಗೆ ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸ್ಪಂದಿಸಿದ್ದಾರೆ. ಈ ಕೇಂದ್ರದಿಂದ ಉತ್ತರ ಕರ್ನಾಟಕದ ವಿಮಾನ ಚಾಲನಾ ತರಬೇತಿ ಬಯಸುವ ಯುವಕರಿಗೆ ಉತ್ತಮ ಅವಕಾಶ ಸಿಕ್ಕಂತಾಗುತ್ತದೆ ಹಾಗೂ ಈ ಕೇಂದ್ರ ಸ್ಥಾಪನೆಯಿಂದ ಕೈಗಾರಿಕೋದ್ಯಮಕ್ಕೂ ಸಹಕಾರಿಯಾಗಲಿದೆ ಎಂದು ಜೋಶಿ ತಿಳಿಸಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಚಾಲನಾ ತರಬೇತಿ ಕೇಂದ್ರ ಸ್ಥಾಪಿಸಲು ಒಪ್ಪಿಗೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರುಗಳಿಗೆ ಸಚಿವ ಜೋಶಿ ಧನ್ಯವಾದಗಳನ್ನು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಕರ್ನಾಟಕದ ಮೊದಲ ಹಂತದಲ್ಲಿ ಶೇ. 69.23 ಮತದಾನ ; 14 ಕ್ಷೇತ್ರಗಳ ಮತದಾನದ ಪ್ರಮಾಣದ ವಿವರ...

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement