ವಾರಾಂತ್ಯ ಕರ್ಫ್ಯೂ ವೇಳೆ ಬಿಎಂಟಿಸಿ ಬಸ್ ಸಂಚಾರ ಅಗತ್ಯ ಸೇವೆ ನೌಕರರಿಗೆ ಮಾತ್ರ ಸೀಮಿತ.. ಇಲ್ಲಿದೆ ಮಾಹಿತಿ

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯ ಕರ್ಫ್ಯೂ ನಿಯಮಾವಳಿಗಳಿಗೆ ಅನುಗುಣವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಿದೆ.

ಕರ್ಫ್ಯೂ ವೇಳೆ ಬಸ್​ಗಳಲ್ಲಿ ಸಂಚರಿಸಲು ಬಿಎಂಟಿಸಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ವಾರಾಂತ್ಯ ಕರ್ಫ್ಯೂ ಇರುವ ದಿನಗಳಲ್ಲಿಯೂ ಬೆಳಿಗ್ಗೆ 6ರಿಂದ ರಾತ್ರಿ 10 ಗಂಟೆ ವರೆಗೆ ಬಸ್​ಗಳ ಸಂಚಾರ ಇರುತ್ತದೆ. ವೀಕೆಂಡ್ ಕರ್ಫ್ಯೂ ವೇಳೆ ಜನಸಾಮಾನ್ಯರಿಗೆ ಬಿಎಂಟಿಸಿ ಬಸ್‌ಗಳ ಸಂಚಾರ ಇರುವುದಿಲ್ಲ. ಅಗತ್ಯ ಸೇವೆಗಳಡಿ ಕೆಲಸ ಮಾಡುವ ಸಿಬ್ಬಂದಿಗೆ ಮಾತ್ರ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಕೊರೊನಾ ಮಾರ್ಗಸೂಚಿ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸಾರಿಗೆ ನಿಗಮದ ಬಸ್​ಗಳಲ್ಲಿ ಸಂಚರಿಸಲು ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಸರ್ಕಾರದ ಆದೇಶದ ಅನ್ವಯ ಅನುಮತಿ ಪಡೆದ ಇತರ ವಲಯಗಳ ಸಿಬ್ಬಂದಿಗೂ ಪ್ರಯಾಣಕ್ಕೆ ಅವಕಾಶವಿದೆ. ಪ್ರಯಾಣದ ವೇಳೆ ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ತಮ್ಮೊಡನೆ ಇರಿಸಿಕೊಂಡಿರಬೇಕು. ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರವನ್ನು ಕಡ್ಡಾಯಗೊಳಿಸಲಾಗಿದೆ. ಬಸ್​​ನಲ್ಲಿ ಪ್ರಯಾಣಿಕರು ಮಾಸ್ಕ್​​ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಆಸ್ಪತ್ರೆಗೆ ತರಳುವ ರೋಗಿ ಮತ್ತು ಸಹಾಯಕರ ಪ್ರಯಾಣಕ್ಕೆ ಅವಕಾಶವಿದೆ. ತುರ್ತು, ಅಗತ್ಯ ಸೇವೆಗಳಿಗೆ ಮಾತ್ರ ವಿಶೇಷ ಬಸ್​ಗಳ ಸೇವೆ ಇರಲಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿ, ಸರ್ಕಾರಿ, ಖಾಸಗಿ ಬ್ಯಾಂಕ್​​, ವಿಮಾ ಇಲಾಖೆ ಸಿಬ್ಬಂದಿಗೂ ಪ್ರಯಾಣಿಸಲು ಅವಕಾಶವಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ವಲಯಗಳನ್ನು ಹೊರತುಪಡಿಸಿ ಶೇ.10ರಷ್ಟು ಅಗತ್ಯ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ. ಬೆಳಿಗ್ಗೆ 6ರಿಂದ ರಾತ್ರಿ 10 ಗಂಟೆ ವರೆಗೆ ಬಿಎಂಟಿಸಿ ಬಸ್ ಅಗತ್ಯ ಸೇವೆಗಳನ್ನು ಒದಗಿಸುವ ಇಲಾಖೆಗಳು, ಜನರ ಸೇವೆಗಾಗಿ ಲಭ್ಯವಿರಲಿದೆ ಎಂದು ತಿಳಿಸಿದೆ.
ಆದರೆ ಇದನ್ನು ಹೊರತುಪಡಿಸಿ ಶನಿವಾರ, ಭಾನುವಾರ ಬಿಎಂಟಿಸಿ ಬಸ್ಸಿನಲ್ಲಿ ಸಾರ್ವಜನಿಕರ ಪ್ರಯಾಣಕ್ಕೆ ಅನುಮತಿ ಇಲ್ಲ ಎಂದು ಮಾರ್ಗಸೂಚಿ ತಿಳಿಸಿದೆ.
ವೀಕೆಂಡ್ ಕರ್ಫ್ಯೂ​ ವೇಳೆ ನಮ್ಮ ಮೆಟ್ರೋ ಸಂಚಾರಕ್ಕೆ ಅಡ್ಡಿಯಿಲ್ಲ. ಶನಿವಾರ ಮತ್ತು ಭಾನುವಾರ ಎಂದಿನಂತೆ ನಮ್ಮ ಮೆಟ್ರೋ ರೈಲು ಸಂಚರಿಸಲಿದೆ. ನಮ್ಮ ಮೆಟ್ರೋ ಹಸಿರು, ನೇರಳೆ ಮಾರ್ಗದಲ್ಲಿಯೂ ಯಾವುದೇ ಬದಲಾವಣೆಯಿಲ್ಲ. ನಮ್ಮ ಮೆಟ್ರೋದಲ್ಲಿ ಶೇಕಡಾ 50ರಷ್ಟು ಪ್ರಯಾಣಿಕರಿಗೆ ಅವಕಾಶ ಇರಲಿದೆ ಎಂದು ತಿಳಿಸಿದೆ.
ಸಂಚಾರದ ಅವಧಿ ಕಡಿತಗೊಳಿಸಲಾಗಿದೆ.‌ಸದ್ಯ 10ರಿಂದ 15 ನಿಮಿಷಕ್ಕೊಂದು ಮೆಟ್ರೋ ರೈಲು ಕಾರ್ಯಾಚರಣೆಯಾಗುತ್ತಿದೆ. ಕರ್ಫ್ಯೂ ವೇಳೆ ಅರ್ಧ ಗಂಟೆಗೊಂದು ಮೆಟ್ರೋ ರೈಲು ಓಡಾಡಲಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ರಸ್ತೆ ಬೇಕಂದ್ರೆ ಗ್ಯಾರಂಟಿ ಯೋಜನೆಗಳು ಬಂದ್ ಆಗ್ತವೆ : ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಹೇಳಿಕೆ ಚರ್ಚೆಗೆ ಗ್ರಾಸ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement