ಒಂದು ರಾಜ್ಯದ ಪರಿಶಿಷ್ಟ ಸಮುದಾಯದ ವ್ಯಕ್ತಿ ಮತ್ತೊಂದು ರಾಜ್ಯದ ಎಸ್‌ಸಿ/ಎಸ್‌ಟಿ ಸವಲತ್ತು ಪಡೆಯುವಂತಿಲ್ಲ: ಸುಪ್ರೀಂಕೋರ್ಟ್‌

ನವದೆಹಲಿ: ಒಂದು ರಾಜ್ಯದ ಪರಿಶಿಷ್ಟ ಜಾತಿ (ಎಸ್‌ಸಿ) ಅಥವಾ ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿದ ವ್ಯಕ್ತಿ ಮತ್ತೊಂದು ರಾಜ್ಯದಲ್ಲಿ ಅಂತಹ ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರಿದ ವ್ಯಕ್ತಿಗಳಿಗೆ ನೀಡಲಾಗಿರುವ ಸವಲತ್ತು ಮತ್ತು ಪ್ರಯೋಜನಗಳನ್ನು ಪಡೆಯಲು ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.
ಮಹಾರಾಷ್ಟ್ರ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಜಾತಿ ಪ್ರಮಾಣಪತ್ರ ನೀಡುವ ಕ್ರಿಯಾ ಸಮಿತಿ ಮತ್ತಿತರರು ಹಾಗೂ ಭಾರತ ಒಕ್ಕೂಟ ಇನ್ನಿತರರು ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪನ್ನು ಆಧರಿಸಿ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಎ ಎಸ್ ಬೋಪಣ್ಣ ಅವರಿದ್ದ ಪೀಠ ರಾಜಸ್ಥಾನದಲ್ಲಿ ಎಸ್‌ಸಿ ಸಮುದಾಯಕ್ಕೆ ಸೇರಿದ ವ್ಯಕ್ತಿಯಿಂದ ಜಮೀನು ಖರೀದಿಸಲು ಪಂಜಾಬ್‌ನ ಖಾಯಂ ನಿವಾಸಿಯಾಗಿರುವ ಎಸ್‌ಸಿ ಸಮುದಾಯಕ್ಕೆ ಸೇರಿದ ಮೇಲ್ಮನವಿದಾರರು ರಾಜಸ್ಥಾನದಲ್ಲಿ ಎಸ್‌ಸಿ ಸಮುದಾಯಕ್ಕೆ ಒದಗಿಸಿರುವ ಸವಲತ್ತುಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.
ದಾಖಲೆಗಳನ್ನು ಪರಿಗಣಿಸಿದ ಪೀಠ ಜನ ಪ್ರತಿನಿಧಿ ಕಾಯಿದೆ-1950ರ ಸೆಕ್ಷನ್ 20(1)ನ್ನು ಆಧರಿಸಿ ಮೇಲ್ಮನವಿದಾರರು ರಾಜ್ಯದ ಕಾಯಂ ನಿವಾಸಿ ಎನ್ನಲಾಗದು ಎಂದು ಹೇಳಿತು. ವ್ಯಕ್ತಿಯೊಬ್ಬರು ಕ್ಷೇತ್ರದಲ್ಲಿ ವಾಸಿಸುವ ಮನೆ ಹೊಂದಿದ್ದಾರೆ ಅಥವಾ ಅದರ ಸ್ವಾಮ್ಯ ಹೊಂದಿದ್ದಾರೆ ಎಂಬ ಒಂದೇ ಕಾರಣಕ್ಕೆ ಅವರನ್ನು ಆ ಕ್ಷೇತ್ರದ ʼಸಾಮಾನ್ಯ ನಿವಾಸಿʼ ಎಂದು ಪರಿಗಣಿಸಲಾಗದು ಎಂದು ಕಾಯಿದೆ ವಿವರಿಸುತ್ತದೆ. ಮೇಲ್ಮನವಿದಾರರು ರಾಜಸ್ಥಾನಕ್ಕೆ ಸೇರಿದವರಲ್ಲ ಎಂದು ಖಾತ್ರಿಯಾದ ಬಳಿಕ ನ್ಯಾಯಾಲಯ ಅವರು ಪಂಜಾಬ್‌ನಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯಾಗಿದ್ದು, ಅಲ್ಲಿ ವಾಸಿಸುತ್ತಿದ್ದಾರೆ. ಅವರು ರಾಜಸ್ಥಾನ ವಸಾಹತೀಕರಣ ಕಾಯಿದೆ- 1954ರ ಸೆಕ್ಷನ್ 42ಕ್ಕೆ ಸಂಬಂಧಿಸಿದಂತೆ ರಾಜಸ್ಥಾನದಲ್ಲಿ ಪರಿಶಿಷ್ಟ ಜಾತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದೇ ಎಂದು ಪರಿಗಣಿಸಲು ಮುಂದಾಯಿತು.
ರಾಜಸ್ಥಾನ ಹಿಡುವಳಿ ಕಾಯಿದೆ, 1955ರ ಸೆಕ್ಷನ್ 42ರ ಪ್ರಕಾರ, ಪರಿಶಿಷ್ಟ ಜಾತಿಯ ಸದಸ್ಯರಲ್ಲದ ವ್ಯಕ್ತಿಗೆ ಪರಿಶಿಷ್ಟ ಜಾತಿಯ ಸದಸ್ಯರಿಂದ ಮಾರಾಟ, ಉಡುಗೊರೆ ಅಥವಾ ಉಯಿಲು ಮಾಡುವುದಕ್ಕೆ ನಿರ್ಬಂಧವಿದೆ.
ಮರ್ರಿ ಚಂದ್ರಶೇಖರ್ ರಾವ್ ಮತ್ತು ಸೇಥ್‌ ಜಿ ಎಸ್‌ ವೈದ್ಯಕೀಯ ಕಾಲೇಜಿನ ಡೀನ್‌ ಮತ್ತಿತರರು ಹಾಗೂ ಕ್ರಿಯಾ ಸಮಿತಿ ನಡುವಣ ಪ್ರಕರಣದಲ್ಲಿ ನ್ಯಾಯಾಲಯ ಈ ಸಮಸ್ಯೆಯನ್ನು ನಿರ್ಣಾಯಕವಾಗಿ ಇತ್ಯರ್ಥಗೊಳಿಸಲಾಗಿದೆ ಎಂದು ಪೀಠ ತಿಳಿಸಿದೆ. ಸಾಮಾಜಿಕ ಸ್ಥಿತಿ ಎಂಬುದು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ ಮತ್ತು ಇಡೀ ದೇಶಕ್ಕೆ ಅನ್ವಯವಾಗುವಂತೆ ಯಾವುದೇ ಜಾತಿ ಅಥವಾ ಪಂಗಡವನ್ನು ಎಸ್‌ಸಿ / ಎಸ್‌ಟಿ ಎಂದು ಸಾಮಾನ್ಯೀಕರಿಸುವುದು ಸರಿಯಲ್ಲ ಎಂದು ಮರ್ರಿ ಚಂದ್ರಶೇಖರ್ ರಾವ್ ಪ್ರಕರಣದಲ್ಲಿ ವಿವರಿಸಲಾಗಿದೆ. ಶಿಕ್ಷಣ ಅಥವಾ ಉದ್ಯೋಗಕ್ಕೆ ಸಂಬಂಧಿಸದೆ ಭೂಮಿ ಮಾರಾಟಕ್ಕೆ ಸಂಬಂಧಿಸಿದ ವ್ಯಾಜ್ಯ ಇದಾಗಿದ್ದರೂ ಈ ಪ್ರಕರಣಕ್ಕೂ ಮರ್ರಿ ಚಂದ್ರಶೇಖರ್ ರಾವ್ ಪ್ರಕರಣದ ತೀರ್ಪು ಅನ್ವಯವಾಗಲಿದೆ.
ಮೇಲ್ಮನವಿದಾರರು ಪಂಜಾಬ್ ರಾಜ್ಯದ ಪರಿಶಿಷ್ಟ ಜಾತಿಯ ವ್ಯಕ್ತಿಯಾಗಿದ್ದು ಅವರು ಪಂಜಾಬ್ ರಾಜ್ಯದ ಸಾಮಾನ್ಯ ಮತ್ತು ಕಾಯಂ ನಿವಾಸಿಯಾಗಿದ್ದಾರೆ. ಮೂಲ ಹಂಚಿಕೆದಾರರಾದ ರಾಜಸ್ಥಾನ ರಾಜ್ಯದ ಪರಿಶಿಷ್ಟ ಜಾತಿಯ ವ್ಯಕ್ತಿಗೆ ಭೂರಹಿತ ವ್ಯಕ್ತಿ ಎಂದು ನೀಡಲಾಗಿರುವ ಭೂಮಿಯನ್ನು ಖರೀದಿಸುವ ಉದ್ದೇಶಕ್ಕಾಗಿ ಮೇಲ್ಮನವಿದಾರರು ರಾಜಸ್ಥಾನದಲ್ಲಿ ಪರಿಶಿಷ್ಟ ಜಾತಿಯ ಸವಲತ್ತುಗಳನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ, ಹೈಕೋರ್ಟ್‌ನ ವಿಭಾಗೀಯ ಪೀಠವು ಸೂಕ್ತ ರೀತಿಯಲ್ಲಿ ತಿಳಿಸಿರುವಂತೆ ಮೇಲ್ಮನವಿದಾರ – ಮೂಲ ಪ್ರತಿವಾದಿಯ ಪರವಾಗಿ ನಡೆದಿರುವ ಮಾರಾಟ ವಹಿವಾಟು ರಾಜಸ್ಥಾನ ಹಿಡುವಳಿ ಕಾಯಿದೆ- 1955ರ ಸೆಕ್ಷನ್ 42ರ ಉಲ್ಲಂಘನೆಯಾಗಿದೆ” ಎಂದು ತೀರ್ಪು ನೀಡಿದ ನ್ಯಾಯಾಲಯ ಮೇಲ್ಮನವಿಯನ್ನು ವಜಾಗೊಳಿಸಿತು.

ಪ್ರಮುಖ ಸುದ್ದಿ :-   127 ವರ್ಷಗಳಷ್ಟು ಹಳೆಯ ಗೋದ್ರೇಜ್ ಗ್ರುಪ್‌ ಇಬ್ಭಾಗ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement