ಅಕ್ರಮ ಮರಳುಗಾರಿಕೆ ಪ್ರಕರಣ: ಪಂಜಾಬ್‌ ಸಿಎಂ ಚನ್ನಿ ಸೋದರಳಿಯ-ಇತರರ ಮನೆಗಳ ಮೇಲೆ ಇಡಿ ದಾಳಿ

ಚಂಡೀಗಢ: ಅಕ್ರಮ ಮರಳು ಗಣಿಗಾರಿಕೆ ಕಂಪನಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆಗೆ ಕೇವಲ ಒಂದು ತಿಂಗಳು ಇರುವಾಗ ಜಾರಿ ನಿರ್ದೇಶನಾಲಯ ಮಂಗಳವಾರ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ.
ತನಿಖಾ ಸಂಸ್ಥೆಯು ಇಂದು ಮುಂಜಾನೆ ಮೊಹಾಲಿಯಲ್ಲಿರುವ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಭೂಪಿಂದರ್ ಸಿಂಗ್ ಹನಿ ಅವರ ನಿವಾಸದಲ್ಲಿ ಶೋಧ ನಡೆಸಿತು. ಫೆಡರಲ್ ಏಜೆನ್ಸಿಯ ಅಧಿಕಾರಿಗಳು ರಾಜ್ಯದ 10-12 ಸ್ಥಳಗಳಲ್ಲಿ ದಾಳಿ ನಡೆಸಿದರು ಎಂದು ವರದಿಯಾಗಿದೆ.
ರಾಜ್ಯದಲ್ಲಿ ಫೆಬ್ರವರಿ 20 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಈ ದಾಳಿಗಳು ನಡೆಯುತ್ತಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ. ಇಡಿ ದಾಳಿ ಕುರಿತು ಪ್ರತಿಕ್ರಿಯಿಸಿದ ಚನ್ನಿ, ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತನ್ನ ಮೇಲೆ ಒತ್ತಡ ಹೇರುವ ಪ್ರಯತ್ನ ಇದಾಗಿದೆ ಎಂದು ಹೇಳಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನನ್ನ ಮೇಲೆ ಒತ್ತಡ ಹೇರಲು ಯತ್ನಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ನಾವು ಇದರ ವಿರುದ್ಧ ಹೋರಾಡಲು ಸಿದ್ಧರಿದ್ದೇವೆ. ಎಂದು ಮುಖ್ಯಮಂತ್ರಿ ಹೇಳಿದರು.
ಆದರೆ ಪಂಜಾಬ್​​ನಲ್ಲಿ ಅಕ್ರಮ ಮರಳು ಗಣಿಗಾರಿಕೆ ಹೆಚ್ಚುತ್ತಿರುವ ಬಗ್ಗೆ ಆಮ್​ ಆದ್ಮಿ ಪಕ್ಷ ಆರೋಪ ಮಾಡಿತ್ತು. ಪಂಜಾಬ್​​ನಲ್ಲಿ ಅದರಲ್ಲೂ ಮುಖ್ಯಮಂತ್ರಿ ಛನ್ನಿ ಅವರ ಸ್ವಕ್ಷೇತ್ರ ಚಮಕೌರ್​ ಸಾಹಿಬ್​​ನಲ್ಲಿಯೇ ಅಕ್ರಮ ಮರಳು ಗಣಿಗಾರಿಕೆ ಹೆಚ್ಚುತ್ತಿದೆ ಎಂದು ಆರೋಪಿಸಿತ್ತು.
ಅಲ್ಲದೆ, ಕಳೆದ ತಿಂಗಳು, ರಾಜ್ಯದ ಎಲ್ಲಾ ಕಾಂಗ್ರೆಸ್ ಶಾಸಕರು ಮರಳು ಅಕ್ರಮ ದಂಧೆಯಲ್ಲಿ ತೊಡಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಆರೋಪಿಸಿದ್ದರು.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಕಾಂಗ್ರೆಸ್ ಪಕ್ಷವನ್ನು ತೊರೆದ ಸಿಂಗ್, ವ್ಯಾಪಾರದಲ್ಲಿ ತೊಡಗಿರುವ ಶಾಸಕರ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ತಿಳಿಸಿದ್ದೇನೆ ಎಂದು ಹೇಳಿದ್ದರು.

ಪ್ರಮುಖ ಸುದ್ದಿ :-   ಪಹಲ್ಗಾಮ್ ದಾಳಿ : ಭಯೋತ್ಪಾದಕ ಗುಂಪು ಲಷ್ಕರ್ ಅಂಗಸಂಸ್ಥೆ ಟಿಆರ್‌ಎಫ್ ವಿರುದ್ಧ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಪುರಾವೆ ಸಲ್ಲಿಸಲಿರುವ ಭಾರತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement