ಮಂಗಳೂರು: ಆಸ್ಪತ್ರೆಯಲ್ಲಿ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ತಿಳಿದು ಅಂಬುಲೆನ್ಸ್ನಲ್ಲಿ ಕೊಂಡೊಯ್ಯುತ್ತಿದ್ದಾಗ ಆತ ಕಣ್ಣು ಬಿಟ್ಟು ಉಸಿರಾಡಿದ ಘಟನೆ ನಡೆದ ಬಗ್ಗೆ ವರದಿಯಾಗಿದೆ.
ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕದ ವಾಂತಿಚ್ಚಾಲ್ ನಿವಾಸಿ ಗುರುವ (60) ಎಂಬವರನ್ನು ವಯೋಸಹಜ ಅನಾರೋಗ್ಯದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೋಗಿಗೆ ಆಮ್ಲಜನಕ ವ್ಯವಸ್ಥೆ ಕಲ್ಪಿಸಲಾಗಿತ್ತು. ರೋಗಿಯು ಆಕ್ಸಿಜನ್ ಸಹಾಯದಿಂದ ಉಸಿರಾಟ ನಡೆಸುತ್ತಿದ್ದು, ಆಕ್ಸಿಜನ್ ತೆಗೆದರೆ ಸಾಯುತ್ತಾರೆ ಎಂದು ಸಂಬಂಧಿಕರಿಗೆ ತಿಳಿಸಲಾಗಿತ್ತು..
ವ್ಯಕ್ತಿ ಬದುಕುವ ಸಾಧ್ಯತೆ ಇಲ್ಲದ್ದರಿಂದ ಆಕ್ಸಿಜನ್ ಸಪೋರ್ಟ್ ತೆಗೆಯಲು ಸಂಬಂಧಿಕರು ತಿಳಿಸಿದಂತೆ ಆಕ್ಸಿಜನ್ ಸಪೋರ್ಟ್ ತೆಗೆಯಲಾಗಿತ್ತು. ಆಕ್ಸಿಜನ್ ತೆಗೆದ ಬಳಿಕ ಮೃತಪಟ್ಟಿದ್ದಾರೆ ಎಂದು ಅವರನ್ನು ಅಂಬುಲೆನ್ಸ್ನಲ್ಲಿ ಮನೆಗೆ ಕೊಂಡೊಯ್ಯಲಾಗುತ್ತಿತ್ತು. ಹಾಗೂ ಅಂತ್ಯಸಂಸ್ಕಾರಕ್ಕೆ ಸಿದ್ಧ ಮಾಡಿಕೊಳ್ಳಲು ಸಹ ಸೂಚಿಸಲಾಗಿತ್ತು. ಆದರೆ, ಅಂಬುಲೆನ್ಸ್ನಲ್ಲಿ ಹೋಗುತ್ತಿರುವಾಗ ಕಾಸರಗೋಡು ಜಿಲ್ಲೆಯ ಉಪ್ಪಳ ಎಂಬಲ್ಲಿ ಗುರುವ ಅವರ ದೇಹದಲ್ಲಿ ಚಲನೆ ಕಂಡಿದೆ. ಕಣ್ಣುಬಿಟ್ಟು ಅವರು ಉಸಿರಾಟ ಆರಂಭಿಸಿದ್ದರು. ಕೂಡಲೇ ಅವರನ್ನು ಬದಿಯಡ್ಕದ ಕ್ಲಿನಿಕ್ಗೆ ಕರೆದೊಯ್ದಾಗ ಜೀವಂತವಾಗಿದ್ದಾರೆ ಎಂದು ವೈದ್ಯರು ತಿಳಿಸಿದರು. ಬಳಿಕ ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ