ಕೋಲ್ಕತ್ತಾ: ಕಚ್ಚಾಬಾಂಬ್ ಅನ್ನು ಚೆಂಡು ಎಂದು ಭಾವಿಸಿ ಮಕ್ಕಳು ಆಟವಾಡಿದಾಗ ಸ್ಫೋಟಗೊಂಡು ಮೂವರು ಮಕ್ಕಳು ಗಾಯಗೊಂಡ ಘಟನೆ ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಗಾಯಗೊಂಡ ಮಕ್ಕಳು 11-14 ವರ್ಷದವರಾಗಿದ್ದು, ಮಮುನ್ ಅಲಿ (11), ಆಶಿಕ್ ಶೇಖ್ (14) ಮತ್ತು ಜೆವೆಲ್ ಶೇಖ್ (12) ಎಂದು ಗುರುತಿಸಲಾಗಿದೆ. ಅವರನ್ನು ಮುರ್ಶಿದಾಬಾದ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಮುಮುನ್ ಪರಿಸ್ಥಿತಿ ಗಂಭೀರವಾಗಿದ್ದು, ಆತನನ್ನು ಕೋಲ್ಕತ್ತಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದಾರೆ.
ಈ ಮೂವರೂ ಮಕ್ಕಳು ಮುರ್ಶಿದಾಬಾದ್ ಜಿಲ್ಲೆಯ ಹಳ್ಳಿಯೊಂದರ ಬಯಲಿನಲ್ಲಿ ಕ್ರಿಕೆಟ್ ಆಡುತ್ತಿದ್ದರು. ಅದರಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಬಾಲಕ, ಬಾಲ್ ಹೊಡೆದ ರಭಸಕ್ಕೆ ಅದು ಹತ್ತಿರದಲ್ಲೇ ಇದ್ದ ಸೂರ್ಯಕಾಂತಿ ಹೂವಿನ ತೋಟಕ್ಕೆ ಹೋಗಿ ಬಿತ್ತು. ನಂತರ ಚೆಂಡನ್ನು ಹುಡುಕಲು ಎಲ್ಲ ಬಾಲಕರೂ ಹೊಲಕ್ಕೆ ಹೋಗಿದ್ದರು. ಆಗ ಈ ಕಚ್ಚಾಬಾಂಬ್ ಸಿಕ್ಕಿತ್ತು. ನೋಡಲು ಚೆಂಡಿನಂತೇ ಕಾಣುವ ಕಚ್ಚಾಬಾಂಬ್ನ್ನು ಎತ್ತುಕೊಂಡು ಅದನ್ನೇ ಹಾರಿಸಲು ಪ್ರಾರಂಭಿಸಿದರು. ಅದು ಕೆಳಗೆ ಬಿದ್ದು ಸ್ಫೋಟಗೊಂಡ ಪರಿಣಾಮ ಮೂವರು ಗಾಯಗೊಂಡಿದ್ದಾರೆ.
ಮುರ್ಶಿದಾಬಾದ್ನಲ್ಲಿ ಒಟ್ಟು ಏಳು ಸ್ಥಳೀಯ ಸಂಸ್ಥೆಗಳ ಚುನಾವಣೆ ಫೆಬ್ರವರಿಯಲ್ಲಿ ನಡೆಯಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಸ್ಥಳೀಯ ರಾಜಕೀಯ ಪಕ್ಷಗಳ ಬೆಂಬಲಿತ ಗೂಂಡಾಗಳೇ ಹೀಗೆ ಬಾಂಬ್ ಸ್ಫೋಟಿಸಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಕೆಲವೇ ದಿನಗಳ ಹಿಂದೆ ಇದೇ ಜಿಲ್ಲೆಯ ಬೇಳ್ದಂಗಾ ಎಂಬಲ್ಲಿ ಹೊಲದಲ್ಲಿ ಕೆಲವು ಕಚ್ಚಾ ಬಾಂಬ್ಗಳು ಸ್ಫೋಟಗೊಂಡು ಒಬ್ಬರು ಮೃತಪಟ್ಟಿದ್ದರು. ಇನ್ನೂ ಕೆಲವು ಗಾಯಗೊಂಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ