ಹಾಲಿನ ದರ, ವಿದ್ಯುತ್‌ ದರ ಏರಿಕೆ ಸದ್ಯಕ್ಕಿಲ್ಲ; ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್, ನೀರು ಮತ್ತು ಹಾಲಿನ ದರ ಏರಿಕೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನ ಆರ್‌ಟಿ ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯುತ್, ನೀರು, ಹಾಲಿನ ದರ ಏರಿಕೆ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಅನಿವಾರ್ಯ ಎಂದು ನಿನ್ನೆ ಶುಕ್ರವಾರ ಇಂಧನ ಸಚಿವ ಕೆ. ಸುನಿಲ್‌ಕುಮಾರ್ ಹೇಳಿಕೆ ನೀಡಿದ್ದರು. ಹಾಗೆಯೇ ಕರ್ನಾಟಕ ಹಾಲು ಮಹಾ ಮಂಡಳಿಯ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ, ನಂದಿನಿ ಹಾಲಿನ ದರವನ್ನು ೨ ರೂ. ಏರಿಕೆ ಮಾಡಲು ಸರ್ಕಾರದ ಅನುಮತಿ ಕೋರಿದ್ದೇವೆ ಎಂದು ತಿಳಿಸಿದ್ದರು. ಈಗ ಮುಖ್ಯಮಂತ್ರಿ ಬೊಮ್ಮಾಯಿ ಅವರು ಏರಿಕೆ ಸದ್ಯಕ್ಕಿಲ್ಲ ಎಂದು ಹೇಳಿದ್ದಾರೆ.
ವಿದ್ಯುತ್, ಹಾಲಿನ ದರ ಏರಿಕೆ ಜತೆಗೆ ಬೆಂಗಳೂರು ಜಲಮಂಡಳಿ ಸಹ ಕುಡಿಯುವ ನೀರಿನ ದರ ಏರಿಕೆಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು.
ಈ ಹಿನ್ನೆಲೆಯಲ್ಲಿ ಇಂದು ದರ ಏರಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ದರ ಏರಿಕೆ ಬಗ್ಗೆ ಯಾವುದೇ ತೀರ್ಮಾನಗಳಾಗಿಲ್ಲ. ಅವಸರದ ನಿರ್ಧಾರಗಳನ್ನು ಸರ್ಕಾರ ಕೈಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಯಾವುದೇ ಸರ್ಕಾರ ಆಡಳಿತದಲ್ಲಿ ಇದ್ದಾಗ ದರ ಏರಿಕೆ ಪ್ರಸ್ತಾಪಗಳು ಬರುವುದು ಸಹಜ, ಅದನ್ನು ಸದ್ಯಕ್ಕಂತೂ ವಿದ್ಯುತ್, ಹಾಲು, ನೀರಿನ ದರ ಏರಿಕೆ ಇಲ್ಲ ಎಂದರು.
ಜಲ ವಿವಾದ ಸಭೆ…
ಅಂತರರಾಜ್ಯ ಜಲ ವಿವಾದ ಸಂಬಂಧ ಇಂದು ವರ್ಚುವಲ್ ಮೂಲಕ ಸಭೆ ನಡೆಸುತ್ತಿದ್ದೇನೆ. ಈ ಸಭೆಯಲ್ಲಿ ರಾಜ್ಯದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ನ್ಯಾಯಾಲಯದಲ್ಲಿ ರಾಜ್ಯದ ಪರವಾಗಿ ವಕಾಲತು ವಹಿಸುವ ದೆಹಲಿಯಲ್ಲಿರುವ ಹಿರಿಯ ಕಾನೂನು ತಜ್ಞರು ರಾಜ್ಯದ ಅಡ್ವೊಕೇಟ್ ಜನರಲ್ ಪಾಲ್ಗೊಳ್ಳುತ್ತಿದ್ದು, ಜಲ ವಿವಾದಗಳನ್ನು ನ್ಯಾಯಾಲಯದಲ್ಲಿ ಶೀಘ್ರ ಪರಿಹರಿಸಿಕೊಳ್ಳುವ ಸಂಬಂಧ ಚರ್ಚೆಗಳು ನಡೆಯುತ್ತವೆ ಎಂದರು.
ಕೃಷ್ಣಾ ಮತ್ತು ಕಾವೇರಿ ಕೊಳ್ಳದ ಜಲ ವಿವಾದಗಳ ಬಗ್ಗೆ ಚರ್ಚೆಗಳು ನಡೆಯಲಿದ್ದು, ಕೃಷ್ಣಾ ನೀರು ಹಂಚಿಕೆ ಬಗ್ಗೆ ಬಚಾವತ್ ಮತ್ತು ಬ್ರಿಜೇಶ್ ಕಾಳಪ್ಪ ನೇತೃತ್ವದ ನ್ಯಾಯಮಂಡಳಿ ತೀರ್ಪುಗಳು ಬಂದಿವೆ. ಈ ಬಗ್ಗೆ ಅಧಿಸೂಚನೆ ಹೊರ ಬೀಳಬೇಕಿದೆ. ಇದೂ ಸಹ ನ್ಯಾಯಾಲಯದಲ್ಲಿದೆ. ಹಾಗೆಯೇ ಮಹದಾಯಿ ಯೋಜನೆಗೆ ನ್ಯಾಯಮಂಡಳಿ ಒಪ್ಪಿದ್ದರೂ ಅದೂ ಸಹ ಸುಪ್ರೀಂಕೋರ್ಟ್‌ನಲ್ಲಿದೆ. ಕಾವೇರಿ ನದಿಯ ಮೇಕೆದಾಟು ಸೇರಿದಂತೆ ವಿವಿಧ ಯೋಜನೆಗಳ ವಿವಾದಗಳನ್ನು ಆದಷ್ಟು ಬೇಗ ನ್ಯಾಯಾಲಯದಲ್ಲಿ ಪರಿಹರಿಸಿಕೊಳ್ಳುವ ಸಂಬಂಧ ಚರ್ಚೆಗಳಾಗುತ್ತವೆ ಎಂದರು.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement