ಹೈಕಮಾಂಡ್‌ ಜೊತೆ ಚರ್ಚೆಯಾದ ನಂತರವೇ ಸಚಿವ ಸಂಪುಟ ವಿಸ್ತರಣೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಬಿಜೆಪಿ ಹೈಕಮಾಂಡ್‌ ಸೂಚಿಸಿದಾಗ ರಾಜ್ಯದಲ್ಲಿ ಸಂಪುಟ ವಿಸ್ತರಣೆ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದು, ಸದ್ಯವೇ ಸಂಪುಟ ವಿಸ್ತರಣೆಯಿಲ್ಲ ಎಂಬ ಸುಳಿವು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ವಿಚಾರದಲ್ಲಿಯೂ ಗೊಂದಲ ಇಲ್ಲವೇ ಇಲ್ಲ. ಸಂಪುಟದಲ್ಲಿ ನಾಲ್ಕು ಸ್ಥಾನ ಖಾಲಿ ಇರುವಾಗ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆಗಳು ಸಹಜ. ಆದರೆ ಪಕ್ಷದ ವರಿಷ್ಠರು ಹೇಳಿದ ನಂತರವೇ ಸಂಪುಟ ವಿಸ್ತರಣೆಯಾಗುತ್ತದೆ ಎಂದು ತಿಳಿಸಿದರು.
ಸಂಪುಟ ವಿಸ್ತರಣೆ ಯಾವಾಗ ಮಾಡಬೇಕು ಎಂಬ ಬಗ್ಗೆ ವರಿಷ್ಠರ ಜೊತೆ ಚರ್ಚಿಸಿದ ನಂತರ ತೀರ್ಮಾನ ಮಾಡಲಾಗುವುದು. ಸಂಪುಟ ವಿಸ್ತರಣೆ ಸಂಬಂಧ ಚರ್ಚೆ ನಡೆಸಲು ಯಾವಾಗ ಕರೆಯುತ್ತಾರೋ ಆಗ ವರಿಷ್ಠರನ್ನು ಭೇಟಿ ಮಾಡಿ ಚರ್ಚಿಸಿ ಸಂಪುಟ ವಿಸ್ತರಣೆಯ ತೀರ್ಮಾನಗಳು ಆಗುತ್ತವೆ ಎಂದು ಮಾಹಿತಿ ನೀಡಿದರು.
ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ ವಿಚಾರದ ಪ್ರಸ್ತಾವವೂ ತಮ್ಮ ಮುಂದೆ ಇಲ್ಲ ಎಂದು ಅವರು ಸದ್ಯಕ್ಕೆ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳ ನೇಮಕ ಸಾಧ್ಯತೆಯನ್ನು ತಳ್ಳಿ ಹಾಕಿದರು.
ನಿಗಮ ಮಂಡಳಿ ಅಧ್ಯಕ್ಷರ ನೇಮಕ ವಿಚಾರ ಪಕ್ಷದಲ್ಲಿ ಚರ್ಚೆಯಾಗಬೇಕು. ಪಕ್ಷದ ವೇದಿಕೆಯಲ್ಲಿ ಈ ಬಗ್ಗೆ ಪರಾಮರ್ಶೆ ನಡೆಸಿ ನಂತರ ಅವರು ನೀಡುವ ವರದಿ ಆಧಾರದ ಮೇಲೆ ನೇಮಕಾತಿಗಳು ಆಗುತ್ತವೆ. ಸದ್ಯಕ್ಕಂತೂ ಪ್ರಸ್ತಾವ ತಮ್ಮ ಮುಂದೆ ಇಲ್ಲ ಎಂದರು.
ನಾಳೆಯಿಂದ ಮೂರು ದಿನಗಳ ಕಾಲ ಬಿಬಿಎಂಪಿ ಚುನಾವಣೆ ಬಗ್ಗೆ ಪಕ್ಷದಲ್ಲಿ ಸಭೆಗಳು ನಡೆಯಲಿವೆ ಎಂದು ಅವರು ಹೇಳಿದರು.
ಬೆಳಗಾವಿಯಲ್ಲಿ ಸಚಿವ ಉಮೇಶ್ ಕತ್ತಿ ನೇತೃತ್ವದಲ್ಲಿ ನಡೆದ ರಹಸ್ಯ ಸಭೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ನಾಯಕರು ಸಭೆ ಸೇರುವುದು ಸಾಮಾನ್ಯ. ಅದನ್ನು ರಹಸ್ಯ ಸಭೆ ಎಂದು ಮಾಧ್ಯಮದವರು ಹೇಳುತ್ತಾರೆ. ಯಾವುದೇ ಪಕ್ಷದ ನಾಯಕರು ಸಭೆ ಸೇರಿದರೆ ರಹಸ್ಯ ಸಭೆ ಹೇಗಾಗುತ್ತದೆ ಎಂದರು.

ಪ್ರಮುಖ ಸುದ್ದಿ :-   ಭಟ್ಕಳ | ಆಸ್ತಿಗಾಗಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ; ಮಗನಿಗೆ ಗಲ್ಲು ಶಿಕ್ಷೆ, ಅಪ್ಪನಿಗೆ ಜೀವಾವಧಿ ಶಿಕ್ಷೆ ಪ್ರಕಟ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement