ನಾವು ಹಿಂದಿ ವಿರೋಧಿಸುವುದಿಲ್ಲ, ಆದರೆ ಹಿಂದಿ ಹೇರಿಕೆ ವಿರೋಧಿಸುತ್ತೇವೆ: ತಮಿಳುನಾಡು ಸಿಎಂ ಸ್ಟಾಲಿನ್

ಚೆನ್ನೈ: 1967ರಲ್ಲಿ ಅಣ್ಣಾ (ಸಿಎನ್ ಅಣ್ಣಾದೊರೈ) ಅಧಿಕಾರಕ್ಕೆ ಬಂದಾಗ ದ್ವಿಭಾಷಾ ನೀತಿಯನ್ನು ಜಾರಿಗೆ ತಂದು ರಾಜ್ಯಕ್ಕೆ ತಮಿಳುನಾಡು ಎಂದು ಹೆಸರಿಟ್ಟರು ಎಂದು ಮುಖ್ಯಮಂತ್ರಿ ಸ್ಟಾಲಿನ್ ಅವರು ‘ಮೊಝಿಪೋರ್’ (ಭಾಷೆಗಾಗಿ ಸಮರ) ಹುತಾತ್ಮರಿಗೆ ಸನ್ಮಾನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದ್ದಾರೆ.
“ರಾಜ್ಯ ಭಾಷೆಗಳನ್ನು ರಾಷ್ಟ್ರದ ಅಧಿಕೃತ ಭಾಷೆಗಳನ್ನಾಗಿ ಮಾಡುವ ಕಾನೂನುಗಳನ್ನು ತಿದ್ದುಪಡಿ ಮಾಡಲು ನಾವು ಇನ್ನೂ ಹೆಣಗಾಡುತ್ತಿದ್ದೇವೆ” ಎಂದು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದಾರೆ.
ನಾವು ತಮಿಳು ಎಂದು ಹೇಳುವುದರಿಂದ, ನಾವು ಸಂಕುಚಿತ ಮನಸ್ಸಿನವರು ಎಂದು ಅರ್ಥವಲ್ಲ. ಹಿಂದಿ ಮಾತ್ರವಲ್ಲ, ನಾವು ಯಾವುದೇ ಭಾಷೆಯ ವಿರೋಧಿಯಲ್ಲ ಎಂದು ಅವರು ಹೇಳಿದ್ದಾರೆ.
ನಾವು ಹಿಂದಿಯನ್ನು ವಿರೋಧಿಸುವುದಿಲ್ಲ, ಹಿಂದಿ ಹೇರಿಕೆಯನ್ನು ಮಾತ್ರ ವಿರೋಧಿಸುತ್ತೇವೆ. ನಾವು ತಮಿಳನ್ನು ಪ್ರೀತಿಸುತ್ತೇವೆ ಅಂದರೆ ನಾವು ಬೇರೆ ಭಾಷೆಯನ್ನು ದ್ವೇಷಿಸುತ್ತೇವೆ ಎಂದು ಅರ್ಥವಲ್ಲ ಎಂದು ಸ್ಟಾಲಿನ್ ಹೇಳಿದ್ದಾರೆ.
ಒಂದು ಭಾಷೆಯನ್ನು ಕಲಿಯುವುದು ಒಬ್ಬ ವ್ಯಕ್ತಿಯಲ್ಲಿ ಆಸಕ್ತಿಯಾಗಿ ಬರಬೇಕು ಮತ್ತು ಅದನ್ನು ಎಂದಿಗೂ ಹೇರಬಾರದು ಎಂದು ಅವರು ಹೇಳಿದರು.
ಹಿಂದಿಯನ್ನು ಹೇರಲು ಬಯಸುವವರು ಅದನ್ನು ಪ್ರಾಬಲ್ಯದ ಸಂಕೇತವೆಂದು ಪರಿಗಣಿಸುತ್ತಾರೆ. ಒಂದೇ ಧರ್ಮ ಇರಬೇಕು ಎಂದುಕೊಂಡಂತೆ, ಒಂದೇ ಭಾಷೆ ಇರಬೇಕು ಎಂದು ಭಾವಿಸುತ್ತಾರೆ ಎಂದು ಸ್ಟಾಲಿನ್ ಹೇಳಿದ್ದಾರೆ.
ಹಿಂದಿಯನ್ನು ಹೇರಲು ಬಯಸುವ ಶಕ್ತಿಗಳು ಹಿಂದಿ ಭಾಷಿಕರನ್ನು ಎಲ್ಲಾ ಇಲಾಖೆಗಳಲ್ಲಿ ಸೇರಿಸಿ ಹಿಂದಿಯೇತರ ಭಾಷಿಕರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡಲು ಬಯಸುತ್ತವೆ ಎಂದು ಆರೋಪಿಸಿದರು.
ಒಬ್ಬರ ಮಾತೃಭಾಷೆಯನ್ನು ಹಿಂದಿಯೊಂದಿಗೆ ಬದಲಾಯಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಮತ್ತು ಇದನ್ನು ನಾವು ವಿರೋಧಿಸುತ್ತೇವೆ. ಅವರಿಗೆ ತಮಿಳು ಮತ್ತು ತಮಿಳುನಾಡು ಕಹಿಯಾಗಿವೆ ಎಂದು ಹೇಳಿದ್ದಾರೆ.
ತಮಿಳುನಾಡು ಟ್ಯಾಬ್ಲೋವನ್ನು ತಿರಸ್ಕರಿಸಿದ್ದಕ್ಕಾಗಿ ಕೇಂದ್ರ ಸರ್ಕಾರವನ್ನು ಮುಖ್ಯಮಂತ್ರಿ ತರಾಟೆಗೆ ತೆಗೆದುಕೊಂಡರು ಮತ್ತು ಇದು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಸೇನಾಧಿಕಾರಿ ಸೋಫಿಯಾ ಕುರೇಷಿ ಬಗ್ಗೆ ವಿವಾದಾತ್ಮಕ ಹೇಳಿಕೆ : ಮಧ್ಯಪ್ರದೇಶ ಸಚಿವನ ವಿರುದ್ಧ ಎಫ್ಐಆರ್ ದಾಖಲಿಸಲು ಹೈಕೋರ್ಟ್ ಆದೇಶ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement