ಹಿಜಾಬ್ ವಿವಾದ : ಕಾಲೇಜು ಆಡಳಿತ ಮಂಡಳಿಯಿಂದ ವಿದ್ಯಾರ್ಥಿನಿಯರಿಗೆ ಖಡಕ್ ಸಂದೇಶ

ಉಡುಪಿ : ಕಾಲೇಜಿಗೆ ಹಿಜಾಬ್ ಧರಿಸಿ ಬರುವ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ನಡೆದ ಸಭೆಯಲ್ಲಿ ವಿವಾದ ಬಗೆಹರಿಸಲು ನಾನಾ ಮಾರ್ಗೋಪಾಯಗಳನ್ನು ಕಂಡುಕೊಂಡರೂ, ಪಟ್ಟು ಸಡಿಲಿಸದ ವಿದ್ಯಾರ್ಥಿನಿಯರಿಗೆ ಕಾಲೇಜು ಆಡಳಿತ ಮಂಡಳಿ ಖಡಕ್‌ ಸಂದೇಶ ರವಾನಿಸಿದೆ. ನಿಯಮ ಒಪ್ಪಿ ಕಾಲೇಜಿಗೆ ಬರುವುದಾದರೆ ಬನ್ನಿ, ಇಲ್ಲವಾದರೆ ಕ್ಯಾಂಪಸ್​​ಗೆ ಬಂದು ಇತರ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಅಡ್ಡಿ ಪಡಿಸಬೇಡಿ ಎಂಬ ಎಂದು ತಿಳಿಸಲಾಗಿದೆ.
ಸೋಮವಾರ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಮುಸ್ಲಿಂ ಮುಖಂಡರು, ಪೋಷಕರು, ಶಿಕ್ಷಣಾಧಿಕಾರಿಗಳು ಭಾಗವಹಿಸಿದ್ದರು.
ಸರ್ಕಾರದ ನಿರ್ಧಾರ ಪ್ರಕಟಗೊಳ್ಳುವ ವರೆಗೆ ಯಥಾಸ್ಥಿತಿ ಕಾಪಾಡುವುದು ನಮ್ಮ ಕರ್ತವ್ಯ. ಇನ್ನೆರಡು ತಿಂಗಳಲ್ಲಿ ಪರೀಕ್ಷೆಗಳು ಆರಂಭವಾಗಲಿದೆ. ಇತರ ಮಕ್ಕಳ ಪೋಷಕರಿಂದ ದೂರುಗಳು ಬರುತ್ತಿವೆ. ಹೊರಗಿನಿಂದ ಜನ ಪದೇ ಪದೇ ಕಾಲೇಜ್ ಕ್ಯಾಂಪಸ್​​ಗೆ ಬರುವುದರಿಂದ ಶೈಕ್ಷಣಿಕ ವಾತಾವರಣ ಹಾಳಾಗುತ್ತಿದೆ. ಇನ್ಮುಂದೆ ಯಾರೂ ಕಾಲೇಜಿನ ಆವರಣದ ಒಳಗೆ ಬರುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ.
ಈ ಕುರಿತು ಮಾತನಾಡಿದ ಶಾಸಕ ರಘುಪತಿ ಭಟ್​, ಹಿಜಾಬ್​​​ಗಾಗಿ ಹೋರಾಡುತ್ತಿರುವ ನಾಲ್ವರು ವಿದ್ಯಾರ್ಥಿನಿಯರು ಮತ್ತು ಪೋಷಕರು ಈ ಸಭೆಯಲ್ಲಿ ಹಾಜರಾಗಿದ್ದು, ಮನೆಯ ಪುರುಷರಲ್ಲಿ ವಿಚಾರ ತಿಳಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ ಎಂದರು.
ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ ಸೇರಿದಂತೆ ಅನೇಕ ಮುಸ್ಲಿಂ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು. ಸರ್ಕಾರ ಉತ್ತಮ ನಿರ್ಧಾರ ತೆಗೆದುಕೊಂಡಿದೆ. ಹಿಜಾಬ್ ಧರಿಸುವುದು ಇಸ್ಲಾಂನ ಒಂದು ಪದ್ಧತಿ. ಆದರೆ ಶರಿಯತ್ ಆಧಾರಿತ ರಾಷ್ಟ್ರದ ನಿಯಮಗಳೇ ಬೇರೆ, ಪ್ರಜಾಪ್ರಭುತ್ವ ರಾಷ್ಟ್ರದ ನಿಯಮಗಳೇ ಬೇರೆ ಎಂದು ಹೇಳಿದರು
ಭಾರತದಲ್ಲಿ ಸರ್ಕಾರದ ಆದೇಶ ಪಾಲಿಸಬೇಕು. ಹಿಜಾಬ್ ಧರಿಸದೆ ತರಗತಿಗೆ ಬರಲು ಅವಕಾಶ ಇದೆ. ಇಲ್ಲವಾದರೆ ಆನ್​​​ಲೈನ್ ಕ್ಲಾಸ್​​ಗೆ ಅವಕಾಶ ಕಲ್ಪಿಸಲಾಗಿದೆ. ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಪೋಷಕರು ಹೇಳಿದ್ದಾರೆ. ಮತ್ತೊಂದೆಡೆ ಕಾಲೇಜು ಮತ್ತು ಸರ್ಕಾರದ ಆದೇಶವನ್ನು ಪ್ರಶ್ನಿಸಿ ವಿದ್ಯಾರ್ಥಿನಿಯೋರ್ವಳು ಹೈಕೋರ್ಟ್​ ಮೆಟ್ಟಿಲೇರಿದ್ದಾಳೆ. ಹಿಜಾಬ್ ಧರಿಸುವುದು​ ನಮ್ಮ ಮೂಲಭೂತ ಹಕ್ಕು ಎಂದು ಕೋರ್ಟ್ ಮೊರೆ ಹೋಗಿದ್ದಾಳೆ.

ಪ್ರಮುಖ ಸುದ್ದಿ :-   ಸಿದ್ದರಾಮಯ್ಯ ವಿರುದ್ಧದ ನಕಲಿ ಸ್ಟಿಂಗ್‌ ಆಪರೇಷನ್‌ ಪ್ರಕರಣ: ದೆಹಲಿಯ ವ್ಯಕ್ತಿಯ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement