ಪಾಟ್ನಾ: ಕಾರಿನ ಹೆಡ್‌ಲೈಟ್‌ಗಳ ಬೆಳಕಿನಲ್ಲಿ ಪರೀಕ್ಷೆ ಬರೆದಿರುವ ವಿಚಿತ್ರ ಘಟನೆ ನಡೆದಿದೆ.
ಮಂಗಳವಾರ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಪರೀಕ್ಷಾ ಕೇಂದ್ರದಲ್ಲಿ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ 12 ನೇ ತರಗತಿ (ಮಧ್ಯಂತರ) ಪರೀಕ್ಷೆಯನ್ನು ಕಾರ್ ಹೆಡ್‌ಲೈಟ್‌ನಲ್ಲಿ ಬರೆದಿದ್ದಾರೆ.
ಈ ಸಂಬಂಧ ಪೂರ್ವ ಚಂಪಾರಣ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಿರ್ಷತ್ ಕಪಿಲ್ ಅಶೋಕ್ ಅವರು ಮಹಾರಾಜ್ ಹರೇಂದ್ರ ಕಿಶೋರ್ ಕಾಲೇಜಿನ ಕೇಂದ್ರದ ಅಧೀಕ್ಷಕರನ್ನು ಅಮಾನತುಗೊಳಿಸಿದ್ದಾರೆ, ಅವರು ತಮ್ಮ ಪರೀಕ್ಷೆಗಳನ್ನು ಬರೆಯಲು ಪರೀಕ್ಷಾರ್ಥಿಗಳಿಗೆ ಸರಿಯಾದ ಬೆಳಕಿನ ವ್ಯವಸ್ಥೆ ಮಾಡುವಲ್ಲಿ ವಿಫಲರಾಗಿದ್ದಾರೆ. ಕೇಂದ್ರದ ಅಧೀಕ್ಷಕರನ್ನು ಬದಲಾಯಿಸಲಾಗಿದೆ ಎಂದೂ ಹೇಳಲಾಗಿದೆ.
ಪ್ರಶ್ನೆಪತ್ರಿಕೆಗಳು ಪರೀಕ್ಷಾ ಕೇಂದ್ರಕ್ಕೆ ತಡವಾಗಿ ತಲುಪಿದಾಗ ಹಾಗೂ ಡೆಸ್ಕ್‌ಗಳು ಪೂರ್ಣಪ್ರಮಾಣದಲ್ಲಿ ಇಲ್ಲದ ಕಾರಣ ಈ ಎಲ್ಲ ರಾದ್ದಾಂತಗಳು ಪ್ರಾರಂಭವಾಯಿತು. ಪರಿಣಾಮವಾಗಿ ಪರೀಕ್ಷೆಯು ನಿಗದಿತ ಸಮಯಕ್ಕಿಂತ (ಮಧ್ಯಾಹ್ನ 1.45 ರಿಂದ 5 ರವರೆಗೆ) ತಡವಾಗಿ ಸಂಜೆ 4:30 ರ ಸುಮಾರಿಗೆ ಪ್ರಾರಂಭವಾಯಿತು. ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಪರೀಕ್ಷೆ ಕುರಿತಂತೆ ಮನವರಿಕೆ ಮಾಡಿ, ಕೊನೆಗೆ ಸಂಜೆ 4 ಗಂಟೆಗೆ ಮತ್ತೆ ಪರೀಕ್ಷೆಯನ್ನು ಮುಂದುವರಿಸಿ ಸಂಜೆ 7 ಗಂಟೆಗೆ ಮುಕ್ತಾಯಗೊಳಿಸಲಾಗಿತ್ತು.
ಪರೀಕ್ಷಾ ಕೇಂದ್ರದಲ್ಲಿ ಬೆಳಕಿನ ಕೊರತೆಯಿದೆ ಎಂದು ಪರೀಕ್ಷಾರ್ಥಿಗಳು ದೂರಿದರು. ವಿದ್ಯುತ್ ಇಲ್ಲದ ಹಿನ್ನೆಲೆಯಲ್ಲಿ ಜನರೇಟರ್ ವ್ಯವಸ್ಥೆ ಇಲ್ಲದ ಕಾರಣ ಪರೀಕ್ಷಾರ್ಥಿಗಳು ಪೇಪರ್ ಬರೆಯಲು ನಿರಾಕರಿಸಿದರು. ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿಯನ್ನು ಹತೋಟಿಗೆ ತರಲು ಛಟೌನಿ ಪೊಲೀಸ್ ಠಾಣೆಯಿಂದ ಪೊಲೀಸರನ್ನು ಕರೆಸಲಾಯಿತು.
ಯಾವುದೇ ದಾರಿ ಕಾಣದ ಶಿಕ್ಷಕರು ಮತ್ತು ಪರೀಕ್ಷಾ ಮೇಲ್ವಿಚಾರಕರು ಪರೀಕ್ಷಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಲೈಟ್‌ಗಳನ್ನು ಆನ್ ಮಾಡುವಂತೆ ಸಂಸ್ಥೆಯ ಆವರಣದಲ್ಲಿ ನಿಲ್ಲಿಸಿದ ಕಾರುಗಳ ಮಾಲೀಕರಿಗೆ ವಿನಂತಿಸಿದರು. ಅನಂತರ ಕಾರುಗಳ ಹೆಡ್‌ಲೈಟ್ ಬೆಳಗಿಸಲಾಯಿತು..!
ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಈ ಬಗ್ಗೆ ತನಿಖೆ ನಡೆಸಿ ಆದಷ್ಟು ಬೇಗ ವರದಿ ಸಲ್ಲಿಸುವಂತೆ ಜಿಲ್ಲಾ ಶಿಕ್ಷಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದರು. ಸಂಪರ್ಕಿಸಿದಾಗ, ಪೂರ್ವ ಚಂಪಾರಣ್ ಜಿಲ್ಲಾ ಶಿಕ್ಷಣಾಧಿಕಾರಿ ಸಂಜಯಕುಮಾರ್, “ಈ ಕೇಂದ್ರದಲ್ಲಿ ಪರೀಕ್ಷೆ ಹೇಗೆ ಮತ್ತು ಯಾವ ಸಂದರ್ಭಗಳಲ್ಲಿ ತಡವಾಗಿ ಪ್ರಾರಂಭವಾಯಿತು ಎಂದು ನಾವು ನೋಡುತ್ತಿದ್ದೇವೆ” ಎಂದು ಹೇಳಿದರು. ಕೇಂದ್ರದಲ್ಲಿ ಪರೀಕ್ಷಾರ್ಥಿಗಳ ಆಸನ ವ್ಯವಸ್ಥೆಯಲ್ಲಿ ಅಸಮರ್ಪಕ ನಿರ್ವಹಣೆಯಿಂದಾಗಿ ವಿಳಂಬವಾಗಿದೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಪವಿಭಾಗಾಧಿಕಾರಿ ಸೌರಭ್ ಕುಮಾರ್ ಯಾದವ್, “ಕೇಂದ್ರದಲ್ಲಿ ಸರಿಯಾದ ಆಸನ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳುವುದು ಕೇಂದ್ರದ ಅಧೀಕ್ಷಕರ ಪ್ರಮುಖ ಜವಾಬ್ದಾರಿಯಾಗಿದೆ” ಎಂದು ಹೇಳಿದರು.
ರಾಜ್ಯದ 1,471 ಪರೀಕ್ಷಾ ಕೇಂದ್ರಗಳಲ್ಲಿ 13.45 ಲಕ್ಷಕ್ಕೂ ಹೆಚ್ಚು ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಒಟ್ಟು 13,45,939 ಪರೀಕ್ಷಾರ್ಥಿಗಳಲ್ಲಿ 6,97,421 ಬಾಲಕರು ಮತ್ತು 6,48, 518 ಬಾಲಕಿಯರು. ನ್ಯಾಯಯುತ ಪರೀಕ್ಷೆಯನ್ನು ಖಚಿತಪಡಿಸಿಕೊಳ್ಳಲು, 38 ಜಿಲ್ಲೆಗಳಲ್ಲಿ ಹರಡಿರುವ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪ್ರತಿ ಕೇಂದ್ರದಲ್ಲಿ 500 ಪರೀಕ್ಷಾರ್ಥಿಗಳ ಚಟುವಟಿಕೆಗಳ ಮೇಲೆ ನಿಗಾ ಇಡಲು ಒಬ್ಬ ವಿಡಿಯೋಗ್ರಾಫರ್ ಒದಗಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ