ಪ್ರಧಾನಿ ಮೋದಿ ಸೇನಾ ಸಮವಸ್ತ್ರ ಧರಿಸಿದ ಪ್ರಕರಣ: ಪ್ರಧಾನಿ ಕಚೇರಿಗೆ ನೋಟಿಸ್‌ ಜಾರಿ ಮಾಡಿದ ಉತ್ತರ ಪ್ರದೇಶ ಕೋರ್ಟ್‌

ನವದೆಹಲಿ: ಕಳೆದ ವರ್ಷ ಕಾಶ್ಮೀರಕ್ಕೆ ಭೇಟಿ ನೀಡಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇನಾ ಸಮವಸ್ತ್ರವನ್ನು ಧರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ಸಂಬಂಧಿಸಿದಂತೆ ಪ್ರಧಾನಿ ಕಚೇರಿಗೆ ಪ್ರಯಾಗ್‌ರಾಜ್‌ನ ಜಿಲ್ಲಾ ನ್ಯಾಯಾಲಯವು ನೋಟಿಸ್‌ ಜಾರಿಗೊಳಿಸಿದೆ.
ಈ ಕುರಿತು ದೈನಿಕ್‌ ಭಾಸ್ಕರ್‌ ಪತ್ರಿಕೆ ವರದಿ ಮಾಡಿದ್ದು ವಕೀಲ ರಾಕೇಶ್‌ನಾಥ್‌ ಪಾಂಡೆ ಎನ್ನುವವರು ಸಿಆರ್‌ಪಿಸಿ ಸೆಕ್ಷನ್‌ 156(3)ರ ಅಡಿ ದಾಖಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ನಳಿನ್‌ ಕುಮಾರ್ ಶ್ರೀವಾಸ್ತವ ಅವರು ಪ್ರಧಾನಿ ಕಚೇರಿಗೆ ನೋಟಿಸ್‌ ಜಾರಿಗೊಳಿಸಿರುವುದಾಗಿ ವರದಿ ಹೇಳಿದೆ.
ಕಳೆದ ವರ್ಷ ಪ್ರಧಾನಿ ಮೋದಿ ಕಾಶ್ಮೀರದ ನೌಶೇರಾಗೆ ತೆರಳಿದ್ದ ವೇಳೆ ಸೇನೆಯ ಸಮವಸ್ತ್ರವನ್ನು ಧರಿಸಿದ್ದರು. ಇದು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 140ರ ಅಡಿ (ಸೈನಿಕರು, ನಾಕಾದಳದವರು ಅಥವಾ ವಾಯುದಳದವರ ಸಮವಸ್ತ್ರವನ್ನು ಧರಿಸುವುದು) ಅಪರಾಧ ಎಂದು ಪಾಂಡೆ ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.
ಈ ಮೊದಲು ಮುಖ್ಯ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಅವರ ಮುಂದೆ ಅರ್ಜಿದಾರರು ಮನವಿ ಸಲ್ಲಿಸಿದ್ದರು. ಅದರೆ, ತಮ್ಮ ನ್ಯಾಯಾಲಯದ ವ್ಯಾಪ್ತಿಯಲ್ಲಿ ಪ್ರಕರಣದ ನಡೆದಿಲ್ಲವಾದ್ದರಿಂದ ಸಂಬಂಧಪಟ್ಟ ಅಧಿಕಾರ ವ್ಯಾಪ್ತಿ ಹೊಂದಿರುವ ಮ್ಯಾಜಿಸ್ಟ್ರೇಟ್‌ ಮುಂದೆ ಮನವಿ ಸಲ್ಲಿಸಲು ತಿಳಿಸಿದ್ದರು. ಇದನ್ನು ಪ್ರಶ್ನಿಸಿ ಪಾಂಡೆ ಅವರು ಜಿಲ್ಲಾ ನ್ಯಾಯಾಧೀಶರ ಮೊರೆ ಹೋಗಿದ್ದರು ಎಂದು ಅಮರ್‌ ಉಜಾಲಾ ವರದಿ ತಿಳಿಸಿದೆ.

ಪ್ರಮುಖ ಸುದ್ದಿ :-   'ಯಾರೂ ಮೋದಿಗೆ ಮತ ಹಾಕಬೇಡಿ' ಎಂದು ತರಗತಿಯೊಳಗೆ ಹೇಳುತ್ತಿದ್ದ ಸರ್ಕಾರಿ ಶಾಲಾ ಶಿಕ್ಷಕನ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement