ಭಾರತದಲ್ಲಿ 42 ಭಯೋತ್ಪಾದಕ ಸಂಘಟನೆಗಳಿಗೆ ನಿಷೇಧ

ನವದೆಹಲಿ: ಕೇಂದ್ರ ಸರ್ಕಾರದ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ 1967ರ ಅನುಸಾರ ದೇಶದಲ್ಲಿ 42 ಭಯೋತ್ಪಾದಕ ಸಂಘಟನೆಗಳನ್ನು ಗುರುತಿಸಲಾಗಿದ್ದು, 31 ಮಂದಿಯನ್ನು ವೈಯಕ್ತಿಕವಾಗಿ ಭಯೋತ್ಪಾದಕರು ಎಂದು ಘೋಷಿಸಿರುವುದಾಗಿ ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ ರಾಯ್ ರಾಜ್ಯ ಸಭೆಗೆ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಸದಸ್ಯರಾದ ಎ.ವಿಜಯಕುಮಾರ್ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರ ನೀಡಿರುವ ಅವರು, ಭಯೋತ್ಪಾದಕ ಸಂಘಟನೆಗಳ ಜೊತೆ 13 ಕಾನೂನು ಬಾಹಿರ ಸಂಘಟನೆಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ನಿಷೇಧಿತ ವ್ಯಕ್ತಿಗಳು ಮತ್ತು ಸಂಘಟನೆಗಳ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಧಿಕಾರಿಗಳು ನಿಗಾ ವಹಿಸಿದ್ದಾರೆ. ಈ ಸಂಘಟನೆಗಳು ಬೇರೆ ಬೇರೆ ಹೆಸರಿನಲ್ಲಿ ಮತ್ತೆ ಸಂಘಟನೆ ಮಾಡಲು ಅಥವಾ ತಮ್ಮ ಚಟುವಟಿಕೆಗಳನ್ನು ವಿಸ್ತರಣೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
2019ರಲ್ಲಿ ಕಾನೂನಿಗೆ ತಿದ್ದುಪಡಿ ತಂದು ಭಯೋತ್ಪಾದಕರನ್ನು ಬಂಧಿಸುವ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಭಯೋತ್ಪಾದಕ ಸಂಘಟನೆಗಳ ನಾಯಕತ್ವ ಮತ್ತು ಮರುಸೇರ್ಪಡೆ ನಿಯಂತ್ರಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿರುವ ಸಚಿವ ನಿತ್ಯಾನಂದ ರಾಯ್, ದೇಶದಲ್ಲಿ 16 ಸಾವಿರ ಖಾಸಗಿ ಭದ್ರತಾ ಏಜೆನ್ಸಿಗಳು ನೋಂದಣಿಯಾಗಿವೆ. ಖಾಸಗಿ ಭದ್ರತಾ ಏಜೆನ್ಸಿಗಳು 2005ರ ಕಾಯ್ದೆ ಅನುಸಾರ ನೋಂದಣಿ ಮಾಡಿಕೊಳ್ಳುತ್ತವೆ. ರಾಜ್ಯ ಸರ್ಕಾರಗಳೇ ಈ ಸಂಸ್ಥೆಗಳ ಮೇಲೆ ನಿಗಾ ವಹಿಸುತ್ತವೆ ಎಂದು ಸ್ಪಷ್ಟ ಪಡಿಸಿದ್ದಾರೆ.
2019ರಲ್ಲಿ ಕೇಂದ್ರ ಸರ್ಕಾರ ಖಾಸಗಿ ಭದ್ರತಾ ಸಿಬ್ಬಂದಿಗಳ ಪರವಾನಗಿ ವೆಬ್‍ಸೈಟ್ ನಿರ್ವವಣೆ ಮಾಡುತ್ತಿದೆ. ಜನವರಿ 28ರ ವರೆಗೆ ದೇಶದಲ್ಲಿ 16,427 ಏಜೆನ್ಸಿಗಳು ಸೇವೆ ಒದಗಿಸುತ್ತಿವೆ. 18 ವರ್ಷ ಮೇಲ್ಪಟ್ಟವರನ್ನು ಭದ್ರತಾ ಸಿಬ್ಬಂದಿಗಳನ್ನಾಗಿ ನಿಯೋಜಿಸಿಕೊಳ್ಳಬಹುದು, ಗರಿಷ್ಠ ವಯೋಮಿತಿ 65 ವರ್ಷಗಳೆಂದು ನಿಗದಿ ಮಾಡಲಾಗಿದೆ. ಖಾಸಗಿ ಭದ್ರತಾ ಸಿಬ್ಬಂದಿಗೆ ವಿಶೇಷವಾದ ಸ್ಥಾನಮಾನಗಳಿಲ್ಲ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಇಂದು ಕರ್ನಾಟಕದ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ; ಯಲ್ಲೋ ಅಲರ್ಟ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement