ಗೋವು ಕಳ್ಳರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ: ಗೋವು ಕಳ್ಳತನ ಕಡಿವಾಣಕ್ಕೆ ಸಚಿವ ಚವ್ಹಾಣ ಖಡಕ್‌ ಸೂಚನೆ

ಕಾರವಾರ : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋವುಗಳ ಕಳುವು ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಕೂಡಲೇ ಕ್ರಮಕೈಗೊಳ್ಳಬೇಕು. ಪದೇಪದೇ ಗೋವುಗಳನ್ನು ಕಳವು ಮಾಡುವವರ ವಿರುದ್ಧ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿ, ಗಡಿ ಪಾರು ಮಾಡುವಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಿ. ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗೋ ರಕ್ಷಣಾ ಸಮಿತಿ ರಚಿಸಬೇಕು ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಜಿಲ್ಲಾಡಳಿತಕ್ಕೆ ಪತ್ರ ಬರೆದು ಸೂಚನೆ ನೀಡಿದ್ದಾರೆ.
ಕರಾವಳಿ ಭಾಗದಲ್ಲಿ ನಿರಂತರವಾಗಿ ಗೋವುಗಳು ಕಳವು ಆಗುತ್ತಿರುವ ಕುರಿತು ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಯನ್ನು ಸೂಕ್ಷ್ಮವಾಗಿ ಗಮಿನಿಸಿದ್ದೇನೆ. ಈ ಬಗ್ಗೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಗೋ ರಕ್ಷಣಾ ಸಮಿತಿ ರಚಿಸಿ, ಗೋವುಗಳನ್ನು ಅಕ್ರಮವಾಗಿ ಸಾಗಿಸುವ ವಾಹನಗಳ ಮೇಲೆ ಹದ್ದಿನ ಕಣ್ಣಿಡಬೇಕು. ಚಲನ-ವಲನ ಆಧರಿಸಿ, ಈ ಭಾಗದಲ್ಲಿ ರಾತ್ರಿ ಮತ್ತು ಹಗಲು ಪಾಳಿಗಳಲ್ಲಿ ಪೊಲೀಸರ ಬೀಟುಗಳನ್ನು ಹೆಚ್ಚಿಸಬೇಕು, ಚೆಕ್ ಪೋಸ್ಟ್ ಗಳು, ನಾಕಾ ಬಂಧಿಗಳನ್ನು ಪರಿಣಾಮಕಾರಿಯಾಗಿ ಬಲಗೊಳಿಸಿ ತಪಾಸಣೆ ಮಾಡುವ ಮೂಲಕ ಗೋವುಗಳನ್ನು ಸಾಕುವವರಲ್ಲಿ ಇರುವ ಭಯದ ವಾತಾವರಣ ನಿರ್ಮೂಲನೆ ಮಾಡಬೇಕು ಎಂದು ಸೂಚಿಸಿದ್ದಾರೆ.
ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ತಂದರೂ ಸಹ ಗೋವುಗಳ ಕಳವು ಪ್ರಕರಣಗಳು ಮತ್ತು ಅಕ್ರಮ ಗೋವುಗಳ ಸಾಗಾಣಿಕೆ ಮುಂದುವರೆದಿದ್ದು, ನಿರಂತರವಾಗಿ ಗೋವುಗಳನ್ನು ಕಳವು ಮಾಡಲಾಗುತ್ತಿದೆ. ಇಂಥವರ ವಿರುದ್ಧ ವಿರುದ್ಧ ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಹಾಗೂ ಗಡಿ ಪಾರು ಮಾಡುವಂತಹ ಕಠಿಣ ಕ್ರಮಗಳನ್ನು ಕೈಗೊಳ್ಳುವುದರಿಂದ ಗೋವು ಕಳವು ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement