ಬೆಂಗಳೂರು: ಜೆಡಿಎಸ್ ಪಕ್ಷ ಸೇರುತ್ತೇನೆ. ಶೀಘ್ರದಲ್ಲಿ ದಿನಾಂಕ ತಿಳಿಸುತ್ತೇನೆ ಎಂದು ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ. ಇದೇ ಜನವರಿ 14ರ ನಂತರ ಜೆಡಿಎಸ್ ಯಾವಾಗ ಸೇರಬೇಕು ಎಂಬುದನ್ನು ತೀರ್ಮಾನ ಮಾಡುತ್ತೇನೆ. ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ತಿರ್ಮಾನ ಮಾಡಿದ್ದೇನೆ. ಇದಕ್ಕೆ ಮುನ್ನ ಮತಾಂತರ ವಿಧೇಯಕ ಚರ್ಚೆಗೆ ಬರುವ ಸಾಧ್ಯತೆ ಇದೆ. ನಾನು ರಾಜೀನಾಮೆ ಕೊಟ್ಟರೆ ಬಿಜೆಪಿಗೆ ಸದನದಲ್ಲಿ ಅನುಕೂಲ ಆಗುವುದರಿಂದ ನಂತರ ರಾಜೀನಾಮೆ ನೀಡುತ್ತೇನೆ ಎಂದು ತಿಳಿಸಿದರು.
ಬಿಜೆಪಿ ಮತ್ತು ಕಾಂಗ್ರೆಸ್ ಪರ್ಯಾಯವಾಗಿ ಒಂದು ರಂಗ ಕಟ್ಟಲು ತೀರ್ಮಾನ ಮಾಡಲಾಗಿದೆ. ಸಿದ್ಧಾಂತ ಸಮಾನವಾಗಿರುವ ಜನರ ಜೊತೆಗೆ ರಂಗ ಕಟ್ಟುವ ನಿರ್ಧಾರ ಮಾಡುತ್ತಿದ್ದೇವೆ. ಬಿಜೆಪಿ ಮತ್ತು ಕಾಂಗ್ರೆಸ್ ನಿಂದ ಸಮಾನ ದೂರ ಇರುತ್ತೇವೆ. ಜೆಡಿಎಸ್ ನೇತೃತ್ವದಲ್ಲಿ ಪರ್ಯಾಯ ರಂಗ ರಚನೆ ಆಗಲಿದೆ ಎಂಬ ವಿಶ್ವಾವಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುರಿತಾಗಿ ಮಾತನಾಡಿದ ಅವರು, ಸ್ನಾನ ಮಾಡುವ ನೀರಿನಲ್ಲಿ ಸೋಪು ಇಟ್ಟರೆ ಹೇಗಾಗುತ್ತದೆಯೊ ಹಾಗಾಗಿದೆ ಯಡಿಯೂರಪ್ಪ ಪರಿಸ್ಥಿತಿ. ಯಡಿಯೂರಪ್ಪ ಅವರ ವ್ಯಕ್ತಿತ್ವ ಕರಗುತ್ತಿದೆ. ಇನ್ನೂ ಬಿಜೆಪಿಯಲ್ಲಿ ಇದ್ದು ಏನು ಮಾಡುತ್ತಾರೆ?. ಅಲ್ಲಿಂದ ಹೊರಬರಲಿ ಎಂದರು.
ಸತೀಶ್ ಜಾರಕಿಹೊಳಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದು ಸಿದ್ದರಾಮಯ್ಯ ಅಲ್ಲ. ಟಿಕೆಟ್ ಕೊಡಿಸಿದ್ದು ಸಿಎಂ ಇಬ್ರಾಹಿಂ ಎಂದ ಅವರು, ದಿನೇಶ್ ಗುಂಡೂರಾವ್ ಯಾರೆಂದು ರಾಹುಲ್ ಗಾಂಧಿಗೆ ಗೊತ್ತಿರಲಿಲ್ಲ. ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಆಗಿರುವುದಕ್ಕಿಂತ ಮೊದಲು ರಾಹುಲ್ ಗಾಂಧಿಯವರು ದಿನೇಶ್ ಗುಂಡೂರಾವ್ ಯಾರು ಎಂದು ನನ್ನನ್ನೇ ಕೇಳಿದ್ದರು. ಇಂದಿರಾ ಗಾಂಧಿಯವರು ಪ್ರತಿ ನಾಯಕರನ್ನು ಹೆಸರು ಹಿಡಿದು ಕರೆಯುವಷ್ಟು ಪ್ರಬುದ್ಧರಾಗಿದ್ದರು. ಮುಂದೆ ರಾಜೀವ್ ಗಾಂಧಿ ಕೂಡ ಅದನ್ನು ಮಾಡಿದ್ದರು. ಪಾಪಾ ರಾಹುಲ್ ಗಾಂಧಿಗೆ ಅದನ್ನು ಮುಂದುವರಿಸಲು ಆಗಲಿಲ್ಲ ಎಂದು ಲೇವಡಿ ಮಾಡಿದರು.
ಅಲಿಂಗ ಚಳವಳಿ ಪರ್ಯಾಯ ಚಳವಳಿ. ಅದಕ್ಕೂ ಜನತಾದಳಕ್ಕೂ ಸಂಬಂಧವಿಲ್ಲ. ಅಹಿಂದ ಚಳವಳಿಗೆ ಪರ್ಯಾಯವಾಗಿ ಅಲಿಂಗ ಚಳುವಳಿ ಅಲ್ಲ. ಅಲ್ಪಸಂಖ್ಯಾತರು ಲಿಂಗಾಯತರು, ಒಕ್ಕಲಿಗರು, ಬ್ರಾಹ್ಮಣರು ದಲಿತರು ಪರಸ್ಪರ ಅಪ್ಪಿಕೊಳ್ಳುವುದೇ ಅಲಿಂಗ ಚಳುವಳಿ. ಇದು ರಾಜಕೀಯ ಚಳುವಳಿ ಅಲ್ಲ ಎಂದರು.
ಅಲಿಂಗವನ್ನು ಯಾರು ಲೀಡ್ ಮಾಡಬೇಕು ಎಂಬುದರ ಚರ್ಚೆ ನಡೆಯುತ್ತದೆ. ನಾನು ಅಲಿಂಗದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಚರ್ಚೆ ಮಾಡಲು ಶ್ರೀನಿವಾಸ ಪ್ರಸಾದ್, ಎಚ್ ವಿಶ್ವನಾಥ ಅವರೊಂದಿಗೆ ಚರ್ಚೆ ಮಾಡಲು ಮೈಸೂರಿಗೆ ಹೋಗುತ್ತೇನೆ ಎಂದರು.


ನಿಮ್ಮ ಕಾಮೆಂಟ್ ಬರೆಯಿರಿ