ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆ ತರಬೇತಿ ಕೋರ್ಸ್ ಶೀಘ್ರವೇ ಆರಂಭ: ಸಿಎಂ ಬೊಮ್ಮಾಯಿ

ಬೆಂಗಳೂರು: ಶಾಲಾ- ಕಾಲೇಜುಗಳ ಮಕ್ಕಳಿಗೆ ಶೀಘ್ರದಲ್ಲಿಯೇ ಆತ್ಮರಕ್ಷಣೆ ತರಬೇತಿ ಪ್ರಾರಂಭಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಇಂದು, ಭಾನುವಾರ ವಿಧಾನಸೌಧದ ಮುಂಭಾಗದಲ್ಲಿ ಆಯೋಜನೆ ಮಾಡಿದ್ದ ‘ಓಬವ್ವ ಆತ್ಮ ರಕ್ಷಣಾ ಕಲೆ ತರಬೇತಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಪೊಲೀಸ್ ತರಬೇತಿ ಶಾಲೆಗಳನ್ನು ಬಳಸಿಕೊಂಡು ಶಾಲಾ-ಕಾಲೇಜುಗಳ ಹೆಣ್ಣು ಮಕ್ಕಳಿಗೆ ಮಹಿಳಾ ಆತ್ಮರಕ್ಷಣೆ ಕೋರ್ಸ್‌ ಆರಂಭಿಸುವಂತೆ ಗೃಹ ಇಲಾಖೆಗೆ ಸೂಚಿಸಿದ್ದೇನೆ ಎಂದರು.
ಶಾಲಾ-ಕಾಲೇಜುಗಳ ಹೆಣ್ಣು ಮಕ್ಕಳಿಗೆ ವಿಶೇಷ ಕೋರ್ಸ್‌ ಆತ್ಮರಕ್ಷಣೆಯ ತರಬೇತಿಗೆ ಪೊಲೀಸ್ ತರಬೇತಿ ಶಾಲೆಗಳನ್ನು ಸಜ್ಜುಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಶೀಘ್ರದಲ್ಲೇ ಈ ತರಬೇತಿ ಆರಂಭವಾಗಲಿದೆ ಎಂದರು.

ಕಿಡಿಗೇಡಿಗಳು ಮಹಿಳೆಯರನ್ನು ಕೆಟ್ಟದ್ದಾಗಿ ನೋಡುವ ಮನಃಸ್ಥಿತಿಯಿಂದ ಹಲವಾರು ಹೆಣ್ಣು ಮಕ್ಕಳು ಬಲಿಯಾಗಿದ್ದಾರೆ. ಇದನ್ನು ತಡೆಗಟ್ಟಲು ಕಾನೂನುಗಳಿವೆ. ಆದರೂ, ಮಹಿಳೆಯರಗೆ ಆತ್ಮರಕ್ಷಣೆಯ ತರಬೇತಿಯ ಅಗತ್ಯವಿದೆ. ಇದು ಆತ್ಮವಿಶ್ವಾಸ ನೀಡುತ್ತದೆ ಎಂದರು.
ಸಮಾಜ ಮತ್ತು ಸರ್ಕಾರ ಮಹಿಳೆಯರ ರಕ್ಷಣೆಗೆ ಒಗ್ಗಟ್ಟಾಗಿ ಅವರ ಗೌರವ ರಕ್ಷಣೆಯನ್ನೂ ಮಾಡಬೇಕಿದೆ. ಕಾನೂನು ಸುವ್ಯವಸ್ಥೆ ಉತ್ತಮವಾಗಿರುವ ಕರ್ನಾಟಕದಲ್ಲಿ ಮಹಿಳೆಯರ ರಕ್ಷಣೆಗೆ ಶಾಲೆಗಳ ಮೂಲಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.
ಆತ್ಮರಕ್ಷಣೆ ಪ್ರತಿಯೊಂದು ಜೀವಸಂಕುಲದ ಗುಣಧರ್ಮ, ಆತ್ಮರಕ್ಷಣೆಗೆ ಬೇಕಾಗಿರುವುದು ಆತ್ಮವಿಶ್ವಾಸ, ಯಾವ ವ್ಯಕ್ತಿಗೆ ಆತ್ಮವಿಶ್ವಾಸವಿರುತ್ತದೆಯೋ ಆ ವ್ಯಕ್ತಿ ತನ್ನ ಆತ್ಮ ರಕ್ಷಣೆಯನ್ನು ಸಮರ್ಥವಾಗಿ ಮಾಡಲು ಸಾಧ್ಯ. ಸಮಾಜ ಕಲ್ಯಾಣ ಇಲಾಖೆ ಜಾರಿ ಮಾಡಿರುವ ಓಬವ್ವ ಆತ್ಮ ರಕ್ಷಣಾ ಕಲೆ ಯೋಜನೆ ಹೆಣ್ಣು ಮಕ್ಕಳಿಗೆ ಶಕ್ತಿ ತುಂಬುವ ಟಾನಿಕ್ ಇದ್ದಂತೆ ಎಂದು ಬಣ್ಣಿಸಿದರು.

ಪ್ರಮುಖ ಸುದ್ದಿ :-   ವೀಡಿಯೊಗಳು..| ಬೆಂಗಳೂರಿನಲ್ಲಿ ಭಾರೀ ಮಳೆ : ತಾಪಮಾನ ದಿಢೀರ್‌ ಕುಸಿತ

ಒನಕೆ ಓಬವ್ವ, ಕಿತ್ತೂರು ಚೆನ್ನಮ್ಮ, ಕೆಳದಿ ಚೆನ್ನಮ್ಮ, ಬೆಳವಾಡಿ ಮಲ್ಲಮ್ಮ ಇವರೆಲ್ಲ ಪುರುಷರನ್ನು ಮೀರಿಸುವ ಶೌರ್ಯ ಹೊಂದಿದ್ದರು. ಕೆಳದಿ ಚೆನ್ನಮ್ಮ ಮತ್ತು ಬೆಳವಾಡಿ ಮಲ್ಲಮ್ಮನ ಉತ್ಸವ ಆಚರಣೆಗೂ ಸರ್ಕಾರ ನಿರ್ಧರಿಸಿದೆ ಎಂದರು.
ಸಮಾಜಕಲ್ಯಾಣ ಸಚಿವ ಕೋಟಾಶ್ರೀನಿವಾಸ ಪೂಜಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement