ಹಿಜಾಬ್-ಕೇಸರಿ ಶಾಲು ಶಾಲಾ-ಕಾಲೇಜುಗಳಿಗೆ ತರುವುದು ಬೇಡ, ಅದಕ್ಕಿಂತ ಶಿಕ್ಷಣ ದೊಡ್ಡದು ಎಂದ ಮಾಜಿ ಸಚಿವ ವಿಶ್ವನಾಥ

ಮೈಸೂರು: ಹಿಜಾಬ್-ಕೇಸರಿ ಶಾಲು ಧರಿಸುವ ವಿಚಾರದಲ್ಲಿ ಕಲ್ಲು ತೂರಿ ಗಲಾಟೆ ಮಾಡಿದವರನ್ನು ಪತ್ತೆ ಹಚ್ಚಿ ಬಂಧಿಸುವುದನ್ನು ಬಿಟ್ಟು ಶಾಲಾ-ಕಾಲೇಜುಗಳಿಗೆ ರಜೆ ಕೊಟ್ಟಿದ್ದು ತಪ್ಪು ಎಂದು ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಡಳಿತ ಮತ್ತು ವಿರೋಧ ಪಕ್ಷಗಳಿಂದ ಮಕ್ಕಳಲ್ಲಿ ವಿಷ ಬೀಜ ಬಿತ್ತುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಮಕ್ಕಳನ್ನು ಜಾತಿ, ಧರ್ಮದ ಹೆಸರಿನಲ್ಲಿ ಪ್ರತ್ಯೇಕಿಸಿ ಅವರ ಮನಸ್ಸನ್ನು ಕದಡಬಾರದು. ಆದರೆ ಇವರು ಮಾಡುತ್ತಿದ್ದಾರೆ. ಮಂಡ್ಯದ ಕಾಲೇಜಿನಲ್ಲಿ ಗಲಾಟೆ ಆಗಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಲ್ಲಿದ್ದಾರೆ? ಗಲಾಟೆ ಆಗುತ್ತಿದ್ದರೂ ಏನ್ ಮಾಡ್ತಾ ಇದ್ದಾರೆ ಎಂದು ಪ್ರಶ್ನಿಸಿದರು.
ಮುಸ್ಲಿಂ ಮತೀಯವಾದ, ಹಿಂದೂ ಕೋಮುವಾದ ಎರಡೂ ವಿಜೃಂಭಿಸುತ್ತಿವೆ. ಧರ್ಮ ಮನೆಯ ಒಳಗೆ ಇರಬೇಕೇ ಹೊರತು ಸಾರ್ವಜನಿಕವಾಗಿ ಪ್ರದರ್ಶಿಸಬಾರದು ಎಂದರು. ಕೆಲವು ಮುಸ್ಲಿಂ ಮತಾಂಧರು ಹಿಜಾಬ್ ಹೆಸರಿನಲ್ಲಿ ಗಲಾಟೆ ಸೃಷ್ಟಿಸಿದ್ದಾರೆ. ಕೆಲವರು ಕೇಸರಿ ಶಾಲು ಗಲಾಟೆ ಮಾಡುತ್ತಿವೆ. ಹಿಜಾಬ್, ಕೇಸರಿ ಶಾಲಿಗಿಂತ ಶಿಕ್ಷಣ ದೊಡ್ಡದು. ಹಿಜಾಬ್, ಕೇಸರಿ ಶಾಲು ಮನೆಯೊಳಗೆ ಇಟ್ಟುಕೊಳ್ಳಿ. ಅದನ್ನು ಶಾಲಾ-ಕಾಲೇಜುಗಳಿಗೆ ತರುವುದು ಬೇಡ ಎಂದು ಹೇಳಿದರು.
ಸಮವಸ್ತ್ರ ಧರಿಸುವ ವಿಚಾರದಲ್ಲಿ ಧರ್ಮದ ಸಂಕೇತ ಎಂದು ಬಿಂಬಿಸುವುದು ಬೇಡ. ಶಿಕ್ಷಣ ಕ್ಷೇತ್ರದಲ್ಲಿ ವೋಟಿನ ರಾಜಕಾರಣ ಬೆರಸಿ ಹಾಳು ಮಾಡಬಾರದು ಎಂದು ಸ್ವಪಕ್ಷೀಯ-ವಿಪಕ್ಷದ ನಾಯಕರಿಗೆ ಕಿವಿಮಾತು ಹೇಳಿದರು.

ಪ್ರಮುಖ ಸುದ್ದಿ :-   ಎಸ್‌ಎಸ್‌ಎಲ್‌ಸಿ ಪರೀಕ್ಷೆ -2ರ ವೇಳಾಪಟ್ಟಿ ಬಿಡುಗಡೆ

ಸಮಾಜದಲ್ಲಿ ಅಶಾಂತಿ ಮೂಡಿದ್ದರೂ ಧ್ವನಿ ಎತ್ತದೇ ಧರ್ಮ ಗುರುಗಳು, ಧಾರ್ಮಿಕ ಮುಖಂಡರು ಎಲ್ಲಿ ಹೋದರು? ಕೇವಲ ಅನುದಾನಕ್ಕಾಗಿ ನೀವು ಸೀಮಿತವಾದರೆ, ಸಮಾಜದಲ್ಲಿ ಅಶಾಂತಿ ಮೂಡಿದ್ದರೂ ಏಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement