ಉತ್ತರಪ್ರದೇಶ ಚುನಾವಣೆ: ಮೊದಲ ಹಂತದ ಮತದಾನದಲ್ಲಿ ಸಂಜೆ 6ರ ವರೆಗೆ ಶೇ.59ರಷ್ಟು ಮತದಾನ

ನವದೆಹಲಿ: 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಮೊದಲ ಹಂತದಲ್ಲಿ 11 ಜಿಲ್ಲೆಗಳ 58 ಸ್ಥಾನಗಳಲ್ಲಿ 73 ಮಹಿಳೆಯರು ಸೇರಿದಂತೆ ಒಟ್ಟು 623 ಅಭ್ಯರ್ಥಿಗಳು ಕಣದಲ್ಲಿದ್ದರು.
ಗುರುವಾರ ಸಂಜೆ 6 ಗಂಟೆ ವರೆಗೆ ಬಂದ ಮಾಹಿತಿ ಪ್ರಕಾರ ಅಂದಾಜು ಶೇ.58.77ರಷ್ಟು ಮತದಾನವಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ತಿಳಿಸಿದೆ. ಸಂಜೆ 5 ಗಂಟೆ ವರೆಗೆ ಶೇ.57.79ರಷ್ಟು ಮತದಾನವಾಗಿತ್ತು. ಆದಾಗ್ಯೂ, ಅಂತಿಮ ಲೆಕ್ಕಾಚಾರ ಇನ್ನೂ ಬರಬೇಕಿದೆ.
ಶಾಮ್ಲಿ ಜಿಲ್ಲೆಯ ಮತಗಟ್ಟೆಗಳಲ್ಲಿ ಶೇಕಡಾ 61.78, ಮುಜಾಫರ್ ನಗರದಲ್ಲಿ ಶೇಕಡಾ 62.14, ಬಾಗ್‌ಪತ್‌ನಲ್ಲಿ ಶೇಕಡಾ 61.35, ಮೀರತ್‌ನಲ್ಲಿ ಶೇಕಡಾ 58.52 ಮತ್ತು ಗಾಜಿಯಾಬಾದ್ ಮತ್ತು ಗೌತಮ್ ಬುದ್ಧ ನಗರದಲ್ಲಿ ಶೇಕಡಾ 54.77 ರಷ್ಟು ಮತದಾನವಾಗಿದೆ.
ಅದೇ ರೀತಿ ಹಾಪುರ್ ಜಿಲ್ಲೆಯಲ್ಲಿ ಸಂಜೆ 5 ಗಂಟೆಯವರೆಗೆ ಸರಾಸರಿ ಶೇ.60.50ರಷ್ಟು ಮತದಾನವಾಗಿದೆ. ಬುಲಂದ್‌ಶಹರ್‌ನಲ್ಲಿ ಶೇ.60.52, ಅಲಿಗಢದಲ್ಲಿ ಶೇ.57.25, ಮಥುರಾದಲ್ಲಿ ಶೇ.58.51 ಮತ್ತು ಆಗ್ರಾ ಜಿಲ್ಲೆಯಲ್ಲಿ ಶೇ.56.61ರಷ್ಟು ಮತದಾನವಾಗಿದೆ.
ಗುರುವಾರ ಮತದಾನ ನಡೆದ 11 ಜಿಲ್ಲೆಗಳಲ್ಲಿ 1.24 ಕೋಟಿ ಪುರುಷರು ಮತ್ತು 1.04 ಕೋಟಿ ಮಹಿಳೆಯರು ಸೇರಿದಂತೆ ಒಟ್ಟು 2.28 ಕೋಟಿ ಅರ್ಹ ಮತದಾರರಿದ್ದಾರೆ.
ಮತದಾನ ಬಹುತೇಕ ಶಾಂತಿಯುತವಾಗಿದೆ ಎಂದು ತಿಳಿಸಿರುವ ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ (ಎಸಿಇಒ) ಬಿಡಿ ರಾಮ್ ತಿವಾರಿ ಕೆಲವು ಸ್ಥಳಗಳಲ್ಲಿ ಇವಿಎಂಗಳಲ್ಲಿ ತಾಂತ್ರಿಕ ದೋಷದ ವರದಿಗಳಿವೆ, ಆ ಇವಿಎಂಗಳನ್ನು ಬದಲಾಯಿಸಲಾಗಿದೆ ಎಂದು ತಿಳಿಸಿದರು.
ಸುರೇಶ್ ರಾಣಾ, ಅತುಲ್ ಗಾರ್ಗ್ ಮತ್ತು ಶ್ರೀಕಾಂತ್ ಶರ್ಮಾ ಸೇರಿದಂತೆ ಉತ್ತರ ಪ್ರದೇಶ ಸರ್ಕಾರದ ಒಂಬತ್ತು ಸಚಿವರು ಕ್ರಮವಾಗಿ ಥಾನಾ ಭವನ, ಗಾಜಿಯಾಬಾದ್ ಮತ್ತು ಮಥುರಾದಿಂದ ಕಣದಲ್ಲಿದ್ದರು. 2017 ರಲ್ಲಿ ಗುರುವಾರ ಮತದಾನ ನಡೆದ 58 ಸ್ಥಾನಗಳಲ್ಲಿ ಬಿಜೆಪಿ 53 ಸ್ಥಾನಗಳನ್ನು ಗಳಿಸಿತ್ತು.
ಹಾಪುರದಲ್ಲಿ ಮತ ಚಲಾಯಿಸಿದ 106 ವರ್ಷದ ಮಹಿಳೆ..!
ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದವರಲ್ಲಿ 106 ವರ್ಷದ ಮಹಿಳೆ ಮನ್ನಾ ದೇವಿ ಸೇರಿದ್ದಾರೆ.
ಹಾಪುರ್‌ನ ಲತೀಫ್‌ಪುರ್ ಮಜಾರಾ ಸಪ್ನಾವತ್ ಗ್ರಾಮದ ನಿವಾಸಿಯಾಗಿರುವ ಮನ್ನಾ ದೇವಿ ಅವರಿಗೆ ಮತ ಚಲಾಯಿಸಲು ಐಟಿಬಿಪಿ ಯೋಧರು ಸಹಾಯ ಮಾಡಿದರು.

ಪ್ರಮುಖ ಸುದ್ದಿ :-   ವೀಡಿಯೊ..| ದಕ್ಷಿಣ ಭಾರತದವರು ಆಫ್ರಿಕನ್ನರಂತೆ, ಪೂರ್ವ ಭಾರತದವರು ಚೀನಿಗಳಂತೆ ಕಾಣ್ತಾರೆ....: ಭಾರೀ ವಿವಾದ ಸೃಷ್ಟಿಸಿದ ಪಿತ್ರೋಡಾ ಹೇಳಿಕೆ ; ಕಾಂಗ್ರೆಸ್ಸಿಗೆ ಮುಜುಗರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement