ಕರ್ನಾಟಕ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ ನಲಪಾಡ್‌ ಅಧಿಕಾರ ಸ್ವೀಕಾರ

ಬೆಂಗಳೂರು: ಕರ್ನಾಟಕ ಪ್ರದೇಶ‌ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಮೊಹಮ್ಮದ್ ನಲಪಾಡ್ ಗುರುವಾರ ಅಧಿಕಾರ ಸ್ವೀಕಾರ ಮಾಡಿದರು.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪ್ರಮುಖ ನಾಯಕರ ಸಮ್ಮುಖದಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ, ದೇಶದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವಿನ ಹೋರಾಟ ಅಲ್ಲ, ಸಂವಿಧಾನದ ಪರ-ವಿರುದ್ಧದ ನಡುವಿನ ಹೋರಾಟ ನಡೆಯುತ್ತಿದೆ, ನ್ಯಾಯಯುತವಾಗಿ ದೇಶವನ್ನ ಕಟ್ಟಬೇಕು ಎಂದು ಹೇಳಿದ್ದಾರೆ.
ಆ..ಗುಂಪು.. ಈ… ಗುಂಪು ಎಂದು ಪಕ್ಷದಲ್ಲಿ ಇರಬಾರದು. ಆ ತರಹ ಏನಾದರೂ ನನಗೆ ಕಂಡುಬಂದರೆ ಎತ್ತಿ ಪಕ್ಕಕ್ಕೆ ಇಡುತ್ತೇನೆ. ಈಗಲೇ ಟಿಕೆಟ್ಟಿಗಾಗಿ ಬರಬೇಡಿ, ಮೊದಲು‌ ಪಕ್ಷ ಕಟ್ಟಿ. ಆ ಮೇಲೆ ಅಧಿಕಾರ ತಾನಾಗಿಯೇ ಬರುತ್ತದೆ. ನಾವೆಲ್ಲರೂ ಕೆಳ ಹಂತದಿಂದ ಮೇಲಕ್ಕೆ‌ ಬಂದಿದ್ದೇವೆ. ಪಕ್ಷ ಸಂಘಟನೆ ಮೊದಲು ಮಾಡಿ. ನಲಪಾಡ್ ಮತ್ತು ರಕ್ಷಾ ರಾಮಯ್ಯ ಬಣ ರಾಜಕೀಯಕ್ಕೆ ಶಿವಕುಮಾರ ಎಚ್ಚರಿಕೆ ನೀಡಿದರು.
ಭ್ರಷ್ಟಾಚಾರ ಮಿತಿಮೀರುತ್ತಿದೆ. ಇದನ್ನು ಮುಚ್ಚಿಹಾಕಲು ಹಿಜಾಬ್‍ನಂತಹ ಭಾವನಾತ್ಮಕ ವಿಚಾರವನ್ನು ಮುಂದಿಟ್ಟು ಬಿಜೆಪಿ ನಾಯಕರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಿಚಾರವಾಗಿ ನಲಪಾಡ್ ಹಾಗೂ ರಕ್ಷಾ ರಾಮಯ್ಯ ನಡುವೆ ಭಿನ್ನಾಭಿಪ್ರಾಯ ತಲೆದೋರಿತ್ತು. ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ನಲಪಾಡ್‌ ಹೆಚ್ಚಿನ ಮತ ಬಂದಿದ್ದರೂ ಅಧ್ಯಕ್ಷ ಸ್ಥಾನ ಸಿಕ್ಕಿರಲಿಲ್ಲ. ಭಾರೀ ಮತಗಳಿಕೆ ಹಿಂದೆ ಮೊಹಮ್ಮದ್‌ ನಲಪಾಡ್‌ ಗೆಳೆಯ ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕಿ ಅಲಿಯಾಸ್‌ ಶ್ರೀಕೃಷ್ಣ ಕೈವಾಡ ಇರುವ ಗುಮಾನಿಯೂ ಇತ್ತು. ಹ್ಯಾಕ್‌ ಮಾಡಿ ನಕಲಿ ಮತದಾನ ಮಾಡಲಾಗಿದೆ ಎಂಬ ಶಂಕೆಯೂ ವ್ಯಕ್ತವಾಗಿತ್ತು. ಈ ಬಗ್ಗೆ ಗಂಭೀರವಾದ ಚರ್ಚೆಗಳು ನಡೆದಿದ್ದವು. ಇನ್ನೊಂದೆಡೆ ನಲಪಾಡ್‌ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ರಕ್ಷಾ ರಾಮಯ್ಯಗೆ ಅಧಿಕಾರ ನೀಡಲು ನಿರ್ಧಾರ ಮಾಡಿದ್ದರು. ಇದೀಗ ಕೊನೆಗೂ ನಲಪಾಡ್ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಕೆಪಿಎಸ್‌ಸಿ ಹಗರಣ; ಐಎಎಸ್‌ ಅಧಿಕಾರಿ ಜ್ಞಾನೇಂದ್ರಕುಮಾರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸರ್ಕಾರದ ಅನುಮತಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement