ಬೆಂಗಳೂರು : ಸಾರ್ವಜನಿಕರಿಂದ ಅಳತೆಗಾಗಿ ಮೋಜಿಣಿ ವ್ಯವಸ್ಥೆಯಡಿಯಲ್ಲಿ ಸ್ವೀಕರಿಸುವ ಹದ್ದುಬಸ್ತು ಅರ್ಜಿಗಳಿಗೆ ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶಗಳಿಗೆ ವಿಧಿಸಲಾಗುತ್ತಿದ್ದ ಶುಲ್ಕವನ್ನು ಇಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಅದೇ ರೀತಿ 11 ಇ, ಆಲಿನೇಷನ್ ಪೂರ್ವನಕ್ಷೆ, ಮತ್ತು ತತ್ಕಾಲ್ ಪೋಡಿ ಅರ್ಜಿಗಳಿಗೆ ನಿಗದಿಪಡಿಸಲಾದ ಅರ್ಜಿ ಶುಲ್ಕಗಳನ್ನು ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 131(ಬಿ) ಅನ್ವಯ ಮೋಜಿಣಿಯಲ್ಲಿ ಹದ್ದುಬಸ್ತು ಅರ್ಜಿ ಸಲ್ಲಿಸಲು ಗ್ರಾಮೀಣ ಪ್ರದೇಶದಲ್ಲಿ 2 ಎಕರೆ ವರೆಗೂ 500 ರೂ.ಮತ್ತು 2 ಎಕರೆಗೆ ಹೆಚ್ಚುವರಿ ಇದ್ದರೆ ಪ್ರತಿ ಎಕರೆಗೆ 300 ರೂ. ಶುಲ್ಕ ನಿಗದಿ ಮಾಡಲಾಗಿದೆ. ನಗರ ಪ್ರದೇಶದಲ್ಲಿ 2 ಎಕರೆ ವರೆಗೆ 2 ಸಾವಿರ ರೂ. ಮತ್ತು 2 ಎಕರೆಗಿಂತ ಹೆಚ್ಚಿದ್ದರೆ ಪ್ರತಿ ಎಕರೆಗೆ ಹೆಚ್ಚುವರಿ ಶುಲ್ಕ 400 ರೂ., ನೋಟಿಸ್ ಶುಲ್ಕ 25 ರೂ. ನಿಗದಿ ಮಾಡಿ ಸರ್ಕಾರ ಆದೇಶಿಸಿದೆ.
ಅದೇ ರೀತಿ 11ಇ ನಕ್ಷೆ, ಅಲಿನೇಷನ್ ಪೂರ್ವ ನಕ್ಷೆ ಮತ್ತು ತತ್ಕಾಲ್ ಪೋಡಿಗೆ ಅರ್ಜಿ ಸಲ್ಲಿಸಲು ಗ್ರಾಮೀಣ ಪ್ರದೇಶದಲ್ಲಿ 2 ಎಕರೆ ವರೆಗೂ 1500 ರೂ. ಮತ್ತು 2 ಎಕರೆಗಿಂತ ಹೆಚ್ಚಿದ್ದರೆ ಪ್ರತಿ ಎಕರೆಗೆ ಹೆಚ್ಚುವರಿ ಶುಲ್ಕ 400 ರೂ. ಹಾಗೂ ನಗರ ಪ್ರದೇಶದಲ್ಲಿ 2 ಎಕರೆ ವರೆಗೆ 2500 ರೂ. ಮತ್ತು 2 ಎಕರೆಗಿಂತ ಹೆಚ್ಚು ಇದ್ದರೆ ಪ್ರತಿ ಎಕರೆಗೆ ಹೆಚ್ಚುವರಿ 1 ಸಾವಿರ ರೂ. ನಿಗದಿ ಮಾಡಲಾಗಿದೆ.
ಶಾಸಕರಾದ ದಿನೇಶ್ ಗೂಳಿಗೌಡ ಅವರು ಮನವಿ ಮಾಡಿದ್ದರು. ಆ ನಂತರ ಸರ್ಕಾರವು ಸರ್ವೆ ಶುಲ್ಕದ ಈ ಮೊದಲಿನ ಆದೇಶವನ್ನು ಹಿಂಪಡೆದಿದ್ದು, ಪರಿಷ್ಕೃತ ಆದೇಶವನ್ನು ಹೊರಡಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ