ಸೇತುವೆ ಮೇಲಿನಿಂದ ಕೆಳಗುರುಳಿ ಸರ್ವೀಸ್ ರಸ್ತೆಗೆ ಬಿದ್ದ ಬಸ್: ಇಬ್ಬರು ಸಾವು, ಹಲವರಿಗೆ ಗಾಯ

ಹಾವೇರಿ: ಖಾಸಗಿ ಬಸ್ಸೊಂದು ಪಲ್ಟಿಯಾಗಿ ಸೇತುವೆ ಮೇಲಿಂದ ಸರ್ವೀಸ್ ರಸ್ತೆಗೆ ಬಿದ್ದಿದ್ದರಿಂದ ಇಬ್ಬರು ಮೃತಪಟ್ಟ ಘಟನೆ ತಾಲೂಕಿನ ದೇವಗಿರಿ ಸಮೀಪದ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ನಡೆದಿದೆ.
ಬೆಂಗಳೂರಿನಿಂದ ಗೋಕಾಕ್​​ ಗೆ ಸಂಚರಿಸುತ್ತಿದ್ದ ​ ಬಸ್ ಪಲ್ಟಿಯಾಗಿದ್ದು, ಚಾಲಕ ಸೇರಿ ಇಬ್ಬರು ಮೃತಪಟ್ಟಿದ್ದಾರೆ.
ಅಲ್ಲದೆ ಹದಿನೈದು ಜನರಿಗೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಹಾವೇರಿ ತಾಲೂಕಿನ ದೇವಗಿರಿ ಗ್ರಾಮದ ಬಳಿ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೇತುವೆ ಮೇಲೆ ಬಸ್​ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಪಲ್ಟಿಯಾಗಿ ಸರ್ವೀಸ್​ ರಸ್ತೆಗೆ ಬಿದ್ದಿದೆ. ಭಯಂಕರ ಶಬ್ದ ಕೇಳಿದ ಸ್ಥಳೀಯರು ತಕ್ಷಣವೇ ದೌಡಾಯಿಸಿ ಪ್ರಯಾಣಿಕರ ರಕ್ಷಣೆ ಮಾಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳೀಯರೊಂದಿಗೆ ರಕ್ಷಣಾ ಕಾರ್ಯ ಮುಂದುವರಿಸಿದರು. ಕ್ರೇನ್​ನ ಸಹಾಯದಿಂದ ಬಸ್ ಮೇಲೆತ್ತಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿತ್ತು. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement