ಧಾರವಾಡ: ಇಂದು, ಬುಧವಾರ ಬೆಳಗ್ಗೆ ನಿಧನರಾದ ನಾಡೋಜ ಡಾ.ಚೆನ್ನವೀರ ಕಣವಿಯವರ ಆಶಯದಂತೆ ಅವರ ಅಂತ್ಯಕ್ರಿಯೆ ಪತ್ನಿ ಸಮಾಧಿ ಪಕ್ಕದಲ್ಲೇ ನಡೆಯಲಿದೆ ಎಂದು ಕಣವಿ ಅವರ ಪುತ್ರ ಪ್ರಿಯದರ್ಶಿ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚೆನ್ನವೀರ ಕಣವಿ ಅವರು ಅನಾರೋಗ್ಯದಿಂದ ಜ. 14ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಎಲ್ಲ ಅಂಗಾಂಗಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದವು. ಆದರೆ ಅವರಿಗೆ ಶ್ವಾಸಕೋಶಕ್ಕೆ ಸೋಂಕು ಇತ್ತು. ಅವರನ್ನು ಉಳಿಸಿಕೊಳ್ಳಲು ವೈದ್ಯರು ಸಾಕಷ್ಟು ಪ್ರಯತ್ನ ಮಾಡಿದರೂ ಉಳಿಸಿಕೊಳ್ಳಲು ಆಗಲಿಲ್ಲ ಎಂದು ಹೇಳಿದರು.
ಕಣವಿಯವರ ಆಶಯದಂತೆ ಕೆಲಗೇರಿ ಸಮೀಪದಲ್ಲಿರುವ ಅವರ ಸೃಷ್ಟಿ ಫಾರ್ಮ್ ಹೌಸ್ನಲ್ಲಿ ಕಣವಿಯವರ ಅಂತ್ಯಕ್ರಿಯೆ ಅವರ ಪತ್ನಿ ಸಮಾಧಿ ಪಕ್ಕದಲ್ಲಿಯೇ ನಡೆಯಲಿದೆ ಎಂದುಪ್ರಿಯದರ್ಶಿ ತಿಳಿಸಿದ್ದಾರೆ.
ಅಲ್ಲದೆ, ಚೆನ್ನವೀರ ಕಣವಿಯವರು ಕಲಿತ ಕೆಸಿಡಿ ಕಾಲೇಜಿನಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ, ಇಂದು, ಬುಧವಾರ ಮಧ್ಯಾಹ್ನದಿಂದ ಡಾ.ಚೆನ್ನವೀರ ಕಣವಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಕೆಸಿಡಿ ಆವರಣದಲ್ಲಿ ಇರಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ