ಶಿಕ್ಷಣವು ಎಲ್ಲ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಶಕ್ತಿ ಹೊಂದಿದೆ-ಡಾ. ನ. ವಜ್ರಕುಮಾರ

ಶಿಕ್ಷಣ ಎಲ್ಲ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಶಕ್ತಿ ಹೊಂದಿದೆ-ಡಾ. ನ. ವಜ್ರಕುಮಾರ
ಧಾರವಾಡ : ಶಿಕ್ಷಣವೆಂಬುದು ನಿರಂತರವಾದ ಸಾಧನೆ ಹಾಗೂ ತಪಸ್ಸು. ಶಿಕ್ಷಣ ಎಂದೂ ನಿಲ್ಲದ ಪ್ರವಾಹ. ಇದಕ್ಕೆ ವಯಸ್ಸಿನ, ಲಿಂಗಭೇದಗಳ ಜಾತಿ-ಮತಗಳ ಅಧಿಕಾರ-ಅಂತಸ್ತಿನ ಅಡ್ಡಗೋಡೆಗಳಿಲ್ಲ ಎಂದು ಜೆಎಸ್‌ಎಸ್‌ ಸಂಸ್ಥೆಯ ಕಾರ್ಯದರ್ಶಿ ಡಾ. ನ. ವಜ್ರಕುಮಾರ ಹೇಳಿದರು.
ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಣದಲ್ಲಿ ಒತ್ತಡವಿರಬಾರದು ಮನಸಾರೆ ಒಪ್ಪಿ ಸಂತೋಷದಿಂದ ಪಡೆಯುವ ಶಿಕ್ಷಣವು ಹೆಚ್ಚು ಪರಿಣಾಮಕಾರಿ ಹಾಗೂ ಶಾಶ್ವತವಾದುದು. ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಇದೀಗ ದಶಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ವಿಭಿನ್ನವಾಗಿ ಶಿಕ್ಷಣ ಕ್ಷೇತ್ರದಲ್ಲಿ ಮತ್ತು ಸಾಮಾಜಿಕವಾಗಿ ತನ್ನನ್ನು ತಾನು ಗುರುತಿಸಿಕೊಂಡಿರುವ ಈ ಸಂಸ್ಥೆ ೨೫೦೦ ವಿದ್ಯಾರ್ಥಿಗಳನ್ನು ಹೊಂದಿದ್ದು. ಉತ್ತರ ಕರ್ನಾಟಕದಲ್ಲಿಯೇ ಪ್ರಪ್ರಥಮವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಗ್ರಂಥಾಲಯ ಪ್ರಾರಂಭಿಸಿ ಉನ್ನತ ಹುದ್ದೆಗೆ ಆಕಾಂಕ್ಷಿಗಳಿಗೆ ದಿಕ್ಸೂಚಿಯಾಗಿದೆ ಎಂದರು.
ಡಾ. ಅಜಿತ ಪ್ರಸಾದ ಅವರ ದೂರದೃಷ್ಟಿ ಈ ಸಂಸ್ಥೆಯನ್ನು ಅಗ್ರ ಶ್ರೇಯಾಂಕದಲ್ಲಿ ಇರುವಂತೆ ಮಾಡಿದೆ. ಈ ಸಂಸ್ಥೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಹೇಳಿದರು.
ಪ್ರಾಚಾರ್ಯರಾದ ಡಾ. ಅಜಿತ ಪ್ರಸಾದ ಮಾತನಾಡಿ, ಯಾವುದೇ ಶಿಕ್ಷಣ ಸಂಸ್ಥೆ ಬೆಳೆಯಬೇಕಾದರೆ, ವಿದ್ಯಾರ್ಥಿಗಳ ಶ್ರೇಯಸ್ಸನ್ನು ಗಮನದಲ್ಲಿಟ್ಟುಕೊಂಡು ಸಹಾಯ, ಸಹಕಾರವನ್ನು ನೀಡುವ ಆಡಳಿತ ಮಂಡಳಿ ಪಾತ್ರ ಮುಖ್ಯವಾದದ್ದು. ಇದರೊಂದಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಸಿಬ್ಬಂದಿಯ ಸಹಕಾರವು ಕೂಡ ಅಗತ್ಯ. ಅದೆಲ್ಲವೂ ದೊರೆತಾಗ ಶಿಕ್ಷಣ ಸಂಸ್ಥೆ ಪ್ರಗತಿ ಸಾಧಿಸಲು ಸಾಧ್ಯ ಎಂದರು.
ಈ ಹಿನ್ನೆಲೆಯಲ್ಲಿ ನಮ್ಮಲ್ಲಿ ಎಲ್ಲ ಸಿಬ್ಬಂದಿಯೂ ಸಹಕಾರ ನೀಡುತ್ತ ಬಂದಿದ್ದಾರೆ ಪದವಿ ಪ್ರವೇಶಕ್ಕೆ ಹೆಚ್ಚಿನ ಬೇಡಿಕೆ ಬರುತ್ತಿರುವುದನ್ನು ಪರಿಗಣಿಸಿ ೨೦೧೨ ರಲ್ಲಿ ಪ್ರಾರಂಭಿಸಿದ ಈ ಸಂಸ್ಥೆ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಡಾ. ನ. ವಜ್ರಕುಮಾರ ಅವರ ಮಾರ್ಗದರ್ಶನ, ಎಲ್ಲ ಸಿಬ್ಬಂದಿ ಪ್ರಾಮಾಣಿಕ ಸೇವೆಯಿಂದ ಸಂಸ್ಥೆಯು ಪ್ರಗತಿಯೊಂದಿಗೆ ದಶಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಮೌಲ್ಯಾಧಾರಿತ ಶಿಕ್ಷಣ ದೇಶದ ಉನ್ನತಿಗೆ ಮೂಲಾಧಾರ ಎಂಬ ಅಂಶವನ್ನು ಪರಿಗಣಿಸಿ ಸಾಂಪ್ರದಾಯಿಕ ಶಿಕ್ಷಣದೊಂದಿಗೆ ಕಲೆ, ಕ್ರೀಡೆ, ತರಬೇತಿಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ ಎಂದರು.
ಡಾ. ವೆಂಕಟ್ ನರಸಿಂಹ ಜೋಶಿ ಮಾತನಾಡಿ, ‘ಅನ್ನದಾನಂ ಕ್ಷಣಿಕ: ತೃಪ್ತಿ:, ವಿದ್ಯಾದಾನಂ ಯಾವಜ್ಜೀವಂ’ ಎಂಬ ಮಾತಿಗೆ ತಕ್ಕಂತೆ ಹಸಿದವರಿಗೆ ಅನ್ನ ನೀಡಿದಾಗ ಅದು ಕ್ಷಣಿಕವಾಗಿರುವಂತಹದು. ಆದರೆ ಅದೇ ವಿದ್ಯೆಯನ್ನು ನೀಡಿದಾಗ ಅದು ವಿದ್ಯಾರ್ಥಿಯ ಜೀವನ ಪರ್ಯಂತ ಉಳಿಯುವಂತಹದ್ದು, ಈ ದೂರದೃಷ್ಟಿಯನ್ನಿಟ್ಟುಕೊಂಡು ದೂರದ ದಕ್ಷಿಣಕನ್ನಡದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ ಡಿ ವೀರೇಂದ್ರ ಹೆಗ್ಗಡೆಯವರು ಪೂಜ್ಯ ವಿಶೇಶ್ವತೀರ್ಥ ಶ್ರೀಪಾದಂಗಳವರ ಅಪೇಕ್ಷೆಯಂತೆ ೧೯೭೩ ರಲ್ಲಿ ಧಾರವಾಡದ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಯನ್ನು ಪಡೆದುಕೊಂಡು ಅದಕ್ಕೆ ಸಾರಥಿಯನ್ನಾಗಿ ಪ್ರೊ. ನ. ವಜ್ರಕುಮಾರರವರನ್ನು ಕಳುಹಿಸಿಕೊಟ್ಟರು. ಅವನತಿಯ ಅಂಚಿನಲ್ಲಿದ್ದ ಅಂದಿನ ಜೆ.ಎಸ್.ಎಸ್ ಇಂದು ೨೦ ಕ್ಕೂ ಅಧಿಕ ಅಂಗ ಸಂಸ್ಥೆಗಳನ್ನು ಹೊಂದಿದೆ. ಅದರಲ್ಲಿ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯು ೨೦೧೧ ರ ಫೆಬ್ರವರಿ ೧೬ ರಂದು ಸ್ಥಾಪನೆಗೊಂಡ ಇದೀಗ ೨೫೦೦ಕ್ಕೂ ಅಧಿಕ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ದಾರಿ ಮಾಡಿಕೊಟ್ಟಿರುವುದು ಹೆಮ್ಮೆಯ ಸಂಗತಿಯಾಗಿದೆ. ಡಾ. ನ. ವಜ್ರಕುಮಾರ ಹಾಗೂ ಅಜಿತ ಪ್ರಸಾದ ಅವರ ನಿರಂತರ ಪರಿಶ್ರಮ, ಶಿಸ್ತು, ಸಂಯಮಗಳ ಪ್ರತೀಕವಾಗಿ ಜೆ.ಎಸ್.ಎಸ್ ಸಂಸ್ಥೆಯ ಅಂಗ ಸಂಸ್ಥೆಗಳನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಿರಿಯ ಕವಿಗಳಾದ ನಾಡೋಜಾ ಡಾ. ಚನ್ನವೀರ ಕಣವಿ ಅವರ ನಿಧನಕ್ಕೆ ಎರಡು ನಿಮಿಷ ಮೌನಾಚರಣೆ ಮೂಲಕ ಸಂತಾಪ ಸೂಚಿಸಿಲಾಯಿತು.
ಶ್ರೀಮತಿ ದೀಪಾ ಪ್ರಾರ್ಥಿಸಿದರು ಡಾ. ಸೂರಜ್ ಜೈನ್ ಸ್ವಾಗತಿಸಿದರು, ಡಾ. ಜಿನದತ್ತ ಹಡಗಲಿ ನಿರೂಪಿಸಿದರು ಮಹಾವೀರ ಉಪಾದ್ಯೆ ವಂದಿಸಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement