ಬೆಂಗಳೂರು: ಕೆಂಪುಕೋಟೆಯಲ್ಲಿ ಕೇಸರಿ ಬಾವುಟ ಕುರಿತಾಗಿ ಸಚಿವ ಕೆ. ಎಸ್. ಈಶ್ವರಪ್ಪ ನೀಡಿದ್ದ ವಿವಾದಾತ್ಮಕ ಹೇಳಿಕೆ ವಿಚಾರ ಸದನದಲ್ಲಿ ಭಾರೀ ಗದ್ದಲಕ್ಕೆ ಕಾರಣವಾಯಿತು. ಒಂದು ಹಂತದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಕೈ ಕೈ ಮಿಲಾಯಿಸುವ ಹಂತದ ವರೆಗೆ ಹೋಯಿತು.
ಸದನ ಆರಂಭಗೊಂಡ ಬಳಿಕ ಈ ವಿಚಾರವನ್ನು ಪ್ರಸ್ತಾಪ ಮಾಡಲು ಕಾಂಗ್ರೆಸ್ ಮುಂದಾಯಿತು. ಈ ವೇಳೆ ಸ್ಪೀಕರ್ ಕಾಗೇರಿ, ರಾಷ್ಟ್ರ ಧ್ವಜವನ್ನು ಗೌರವದಿಂದ ಕಾಣಬೇಕು. ಅದಕ್ಕೆ ಅದರದ್ದೇ ಆದ ಗೌರವ ಇದೆ. ಅದನ್ನು ಹೇಗೆ ಬೇಕೋ ಹಾಗೆ ಬಳಸಬೇಡಿ ಎಂದು ಕಾಂಗ್ರೆಸ್ ಸದಸ್ಯರಿಗೆ ಸೂಚಿಸಿದರು. ಆಗ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ತೀವ್ರಗೊಂಡಿತ್ತು. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಸಚಿವ ಈಶ್ವರಪ್ಪ ಕುಳಿತುಕೊಂಡ ಸ್ಥಳಕ್ಕೆ ಧಾವಿಸಿ ಏರು ಧ್ವನಿಯಲ್ಲಿ ಕಿಡಿಕಾರಿದ್ದರು.
ಗದ್ದಲ ತೀವ್ರಗೊಂಡ ಹಿನ್ನೆಲೆಯಲ್ಲಿ ಸ್ಪೀಕರ್ ಸದನವನ್ನು ಮುಂದೂಡಿದ್ದರು. ಆದರೆ ಮತ್ತೆ ಸದನ ಆರಂಭಗೊಂಡ ನಂತರ ಮಧ್ಯಾಹ್ನದ ಬಳಿಕ ಮತ್ತೆ ಇದನ್ನು ಪ್ರಸ್ತಾಪ ಮಾಡಲು ಕಾಂಗ್ರೆಸ್ ಪ್ರಯತ್ನಿಸಿತು.ಆಗ ಸ್ಪೀಕರ್ ಕಚೇರಿಯಲ್ಲಿ ಸಂಧಾನ ಸಭೆ ನಡೆಯಿತು. ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಮತ್ತು ಸಂಸದೀಯ ಕಾತೆ ಸಚಿವ ಜೆ. ಸಿ. ಮಾಧುಸ್ವಾಮಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಂ. ಬಿ. ಪಾಟೀಲ್ ಹಾಗೂ ಅಜಯ್ ಸಿಂಗ್ ಭಾಗವಹಿಸಿದ್ದರು. ಆದರೆ ಈ ಸಂಧಾನ ಸಭೆ ಸಫಳವಾಗಲಿಲ್ಲ. ಕಾಂಗ್ರೆಸ್ ಸದಸ್ಯರು ರಾಷ್ಟ್ರ ಧ್ವಜ ಇಟ್ಟುಕೊಂಡು ಸದನದ ಬಾವಿಯಲ್ಲಿ ನಿಂತು ರಾಷ್ಟ್ರ ಧ್ವಜ ಪ್ರದರ್ಶನ ಮಾಡಿ ಈಶ್ವರಪ್ಪ ವಿರುದ್ಧ ಆಕ್ರೋಶ ಹೊರಹಾಕಿದರು.


ನಿಮ್ಮ ಕಾಮೆಂಟ್ ಬರೆಯಿರಿ