ದೆಹಲಿ ಸಿಎಂ ಕೇಜ್ರಿವಾಲ್ ವಿರುದ್ಧ ಪ್ರತ್ಯೇಕತಾವಾದಿ ಆರೋಪದ ನಂತರ ಕುಮಾರ ವಿಶ್ವಾಸ್‌ಗೆ ‘ವೈ’ ಶ್ರೇಣಿ ಭದ್ರತೆ

ನವದೆಹಲಿ: ಆಮ್ ಆದ್ಮಿ ಪಾರ್ಟಿ (ಎಎಪಿ) ಮಾಜಿ ನಾಯಕ ಕುಮಾರ ವಿಶ್ವಾಸ ಅವರಿಗೆ ‘ವೈ’ ಶ್ರೇಣಿಯ ಭದ್ರತೆ ನೀಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಕುರಿತು ಕುಮಾರ ವಿಶ್ವಾಸ್ ಅವರು ಸಂದರ್ಶನವೊಂದರಲ್ಲಿ ಗಂಭೀರ ಆರೋಪ ಮಾಡಿರುವ ಕಾರಣ ಗುಪ್ತಚರ ಮಾಹಿತಿಗಳ ಆಧಾರದಲ್ಲಿ ಕುಮಾರ್ ವಿಶ್ವಾಸ್ ಅವರ ಭದ್ರತೆಯನ್ನು ಹಾಗೂ ಅವರಿಗೆ ಇರುವ ಬೆದರಿಕೆ ಗ್ರಹಿಕೆಗಳನ್ನು ಕೇಂದ್ರ ಸರ್ಕಾರ ಪರಾಮರ್ಶೆ ಮಾಡಿದೆ.
ಕುಮಾರ್ ವಿಶ್ವಾಸ್ ಅವರಿಗೆ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮೂಲಕ ‘ವೈ’ ಶ್ರೇಣಿ ಭದ್ರತೆ ನೀಡಲಾಗಿದೆ, ವೈ ಶ್ರೇಣಿ ಭದ್ರತೆ ಅಡಿ ಕುಮಾರ ವಿಶ್ವಾಸ್ ಅವರಿಗೆ ನಾಲ್ವರು ಭದ್ರತಾ ಸಿಬ್ಬಂದಿ ಅಧಿಕಾರಿಗಳು ದಿನದ 24 ಗಂಟೆಯೂ ಅವರಿಗೆ ಭದ್ರತೆ ಒದಗಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಂದು ದಿನ, ನಾನು ಒಂದೋ ಪಂಜಾಬ್ ಮುಖ್ಯಮಂತ್ರಿಯಾಗುತ್ತೇನೆ ಅಥವಾ ಸ್ವತಂತ್ರ ದೇಶದ (ಖಲಿಸ್ತಾನ) ಮೊದಲ ಪ್ರಧಾನ ಮಂತ್ರಿ ಆಗುತ್ತೇನೆ ಎಂದು ಅರವಿಂದ ಕೇಜ್ರಿವಾಲ್‌ ನನಗೆ ಹೇಳಿದ್ದರು” ಎಂಬುದಾಗಿ ಕುಮಾರ್ ವಿಶ್ವಾಸ್ ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ್ದ ಸಂದರ್ಶನದಲ್ಲಿ ಆರೋಪ ಮಾಡಿದ್ದು ತೀವ್ರ ವಿವಾದ ಸೃಷ್ಟಿಸಿತ್ತು. ಅರವಿಂದ್ ಕೇಜ್ರಿವಾಲ್ ಅವರು ಅಧಿಕಾರಕ್ಕಾಗಿ ಪ್ರತ್ಯೇಕತಾವಾದಿ ಉಗ್ರರ ಜತೆ ಕೈಜೋಡಿಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಹಾಗೂ ಈ ಬಗ್ಗೆ ತನಿಖೆಗೆ ಒತ್ತಾಯಿಸಿದ್ದವು.
ಇದಕ್ಕೆ ಪ್ರತಿಕ್ರಿಯಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ , ಅವರೆಲ್ಲರೂ ನನ್ನ ವಿರುದ್ಧ ಗುಂಪುಗೂಡಿದ್ದಾರೆ ಮತ್ತು ಭಯೋತ್ಪಾದಕ ಎಂದು ನನ್ನನ್ನು ಕರೆಯುತ್ತಿದ್ದಾರೆ. ಇದೊಂದು ದೊಡ್ಡ ಕಾಮಿಡಿ. ಇದು ನಿಜವಾಗಿದ್ದರೆ, ಪ್ರಧಾನಿ ನರೇಂದ್ರ ಮೋದಿ ಅವರು ನನ್ನನ್ನು ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದರು.
ಅಲ್ಲದೆ, ಬಹುಶಃ ನಾನು ಶಾಲೆಗಳನ್ನು , ಆಸ್ಪತ್ರೆಗಳನ್ನು, ವಿದ್ಯುತ್, ರಸ್ತೆ, ನೀರನ್ನು ನೀಡುವಂತಹ ಜಗತ್ತಿನ ಅತ್ಯಂತ ಸಿಹಿಯಾದ ಭಯೋತ್ಪಾದಕ ಆಗಿರಬೇಕು. ಎಲ್ಲರೂ ನನ್ನ ವಿರುದ್ಧ ಇದ್ದಾರೆ. ಕೇಜ್ರಿವಾಲ್ ದೇಶವನ್ನು ಒಡೆಯಲು ಸಂಚು ಮಾಡುತ್ತಿದ್ದಾರೆ ಮತ್ತು ನಾನು ಒಂದು ಭಾಗದ ಪ್ರಧಾನಿ ಆಗುತ್ತೇನೆ ಎಂದು ಅವರು ಹೇಳುತ್ತಿದ್ದಾರೆ. ಅವರ ದೃಷ್ಟಿಯಲ್ಲಿ ನಾನು ದೊಡ್ಡ ಭಯೋತ್ಪಾದಕ. ಹಾಗಾದರೆ ಭದ್ರತಾ ಸಂಸ್ಥೆಗಳು ಏನು ಮಾಡುತ್ತಿವೆ? ದೇಶದ ಅತಿದೊಡ್ಡ ಪಕ್ಷಗಳು ದೇಶದ ಭದ್ರತೆಯನ್ನು ಅಣಕಿಸುತ್ತಿವೆಯೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದರು.

ಪ್ರಮುಖ ಸುದ್ದಿ :-   ರಾಜ್‌ ಕುಂದ್ರಾಗೆ ಸೇರಿದ ₹97 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement