ದೈವ ಸಂಕಲ್ಪ ಯೋಜನೆಗೆ ಸಿಎಂ ಬೊಮ್ಮಾಯಿ ಚಾಲನೆ

ಬೆಂಗಳೂರು: ರಾಜ್ಯದ ಮುಜರಾಯಿ ದೇವಾಲಯಗಳ ನಿರ್ವಹಣೆಗೆ ಹೊಸ ವ್ಯವಸ್ಥೆ ಮತ್ತು ಎ ದರ್ಜೆಯ ೨೫ ದೇವಾಲಯಗಳ ಸಮಗ್ರ ಅಭಿವೃದ್ಧಿಯ ದೈವಸಂಕಲ್ಪ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು, ಬುಧವಾರ ಚಾಲನೆ ನೀಡಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಅವರು ಆನ್‌ಲೈನ್ ಮೂಲಕ ದೈವಸಂಕಲ್ಪ ಯೋಜನೆ ಮತ್ತು ಮುಜರಾಯಿ ದೇವಸ್ಥಾನಗಳ ಸಮಗ್ರ ನಿರ್ವಹಣೆಯ ಐಟಿಎಂಎಸ್ ಯೋಜನೆಗಳಿಗೆ ಚಾಲನೆ ನೀಡಿದರು.
ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಅವರು ಹೊಸ ಯೋಜನೆ ಬಗ್ಗೆ ಮಾಹಿತಿ ನೀಡಿ ರಾಜ್ಯದ ಎ ದರ್ಜೆಯ ೨೫ ದೇವಸ್ಥಾನಗಳನ್ನು ೧೪೪೦ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಿ ಮೂಲಸೌಲಭ್ಯ ಒದಗಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾರು ಭೇಟಿ ನೀಡುವಂತ ಸೌಲಭ್ಯ ಹಾಗೂ ವಾತಾವರಣ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಕಾಶಿಯನ್ನು ಅಭಿವೃದ್ಧಿಗೊಳಿಸಿದ ಮಾದರಿಯಲ್ಲೇ ರಾಜ್ಯದ ದೇವಸ್ಥಾನಗಳ ಸಮಗ್ರ ಅಭಿವೃದ್ಧಿ ಉದ್ದೇಶವನ್ನು ಇಲಾಖೆ ಹೊಂದಿದೆ. ಮುಜರಾಯಿ ಇಲಾಖೆ ಅಡಿ ಬರುವ ದೇವಸ್ಥಾನಗಳ ಮಾಹಿತಿಯನ್ನು ಬೆರಳ ತುದಿಯಲ್ಲಿ ಪಡೆಯಬಹುದು, ಅಲ್ಲದೆ, ದೇವಸ್ಥಾನಗಳ ನಿರ್ವಹಣೆಗೂ ಅನುಕೂಲವಾಗಲು ಐಟಿಎಂಎಸ್ ವೆಬ್‌ಸೈಟ್‌ ರಚಿಸಲಾಗಿದೆ. ಇದು ಪ್ರಧಾನಿ ಮೋದಿ ಅವರ ಡಿಜಿಟಲ್ ಇಂಡಿಯಾದ ಕನಸನ್ನು ನನಸಾಗಿಸುವ ಪ್ರಯತ್ನ ಎಂದರು.

ಪ್ರಮುಖ ಸುದ್ದಿ :-   ಜಾತ್ರಾ ಮಹೋತ್ಸವದ ವೇಳೆ ರಥದ ಚಕ್ರದಡಿ ಸಿಲುಕಿ ಇಬ್ಬರು ಸಾವು

ಈ ವೆಬ್‌ಸೈಟ್‌ನಲ್ಲಿ ದೇವಾಲಯದ ಸೇವೆಗಳ ವಿವರ, ಸ್ಥಳದ ಮಾಹಿತಿ, ಸ್ಥಿರಾಸ್ತಿಗಳ ವಿವರ, ಆನ್‌ಲೈನ್ ಮತ್ತು ಇ-ಸೇವೆಗಳ ಸೌಲಭ್ಯ ಎಲ್ಲ ಮಾಹಿತಿಯೂ ಇರುತ್ತದೆ. ದೇವಾಲಯದಲ್ಲಿರುವ ಮೂರ್ತಿಗಳ ಮಾಹಿತಿ, ದೇವಸ್ಥಾನಗಳಿಗೆ ನೀಡಲಾಗಿರುವ ಭದ್ರತೆಯ ಮಾಹಿತಿ, ದೇವಾಲಯದ ಅಸ್ತಿಗಳ ವಿವರ, ನ್ಯಾಯಾಲಯದಲ್ಲಿರುವ ಪ್ರಕರಣಗಳ ನಿಗಾವಣೆ ವ್ಯವಸ್ಥೆ, ಡ್ಯಾಶ್ ಬೋರ್ಡ್ ಸೇವೆಗಳು, ಟೆಂಡರ್‌ಗಳ ಮಾಹಿತಿ ಎಲ್ಲವೂ ವೆಬ್‌ಸೈಟ್‌ನಲ್ಲಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಎಸ್.ಎ ರಾಮದಾಸ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಕಂದಾಯ ಇಲಾಖೆ ಕಾರ್ಯದರ್ಶಿ ತುಷಾರ ಗಿರಿನಾಥ, ಮುಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement