ಮುಂಬೈ: ಮಹಾರಾಷ್ಟ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಅವರು ಜಾರಿ ನಿರ್ದೇಶನಾಲಯದ (ಇಡಿ) ವಶದಲ್ಲಿರುವಾಗ ಮನೆ ಆಹಾರ ಮತ್ತು ಔಷಧಿಗಳನ್ನು ಕೋರಿ ಸಲ್ಲಿಸಿದ ಮನವಿಯನ್ನು ಇಲ್ಲಿನ ವಿಶೇಷ ನ್ಯಾಯಾಲಯ ಗುರುವಾರ ಅಂಗೀಕರಿಸಿದೆ.
ವಿಚಾರಣೆಯ ಸಮಯದಲ್ಲಿ ಅವರ ವಕೀಲರು ಗೋಚರ ದೂರದಲ್ಲಿ ಹಾಜರಿರಲು ಸಹ ನ್ಯಾಯಾಲಯವು ಅನುಮತಿ ನೀಡಿದೆ. ಪರಾರಿಯಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹಾಯಕರ ಚಟುವಟಿಕೆಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎನ್‌ಸಿಪಿಯ ಹಿರಿಯ ನಾಯಕ ಮಲಿಕ್ ಅವರನ್ನು ಬುಧವಾರ ಇಡಿ ಬಂಧಿಸಿದೆ.
ಮಾರ್ಚ್ 3 ರವರೆಗೆ ಇಡಿ ಕಸ್ಟಡಿಗೆ ಒಳಗಾದ ನಂತರ, ಮಲಿಕ್ ಅವರ ವಕೀಲರು ಅವರಿಗೆ ಮನೆ ಆಹಾರ ಮತ್ತು ಔಷಧಿಗಳನ್ನು ನೀಡಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ವಿಶೇಷ ನ್ಯಾಯಾಧೀಶ ಆರ್ ಎನ್ ರೋಕಡೆ ಅವರು ಮನವಿಯನ್ನು ಪುರಸ್ಕರಿಸಿದ್ದಾರೆ.
ಕೇಂದ್ರೀಯ ಏಜೆನ್ಸಿಯ ವಿಚಾರಣೆಯ ಸಮಯದಲ್ಲಿ ವಕೀಲರ ಉಪಸ್ಥಿತಿಯನ್ನು ಕೋರಿ ಮಲಿಕ್ ಅವರ ಮನವಿಗೆ ಸಹ ನ್ಯಾಯಾಲಯವು ಅನುಮತಿ ನೀಡಿತು. ಅವರ ವಕೀಲರಾದ ಅಡ್ವೊಕೇಟ್ ಭೂಮಿಕಾ ಗಡ ಅವರಿಗೆ “ಗೋಚರ ದೂರದಿಂದ” ಹಾಜರಾಗಲು ಅವಕಾಶ ನೀಡಿತು, ಆದರೆ “ವಿಚಾರಣೆ ವೇಳೆ ಅವರ ಧ್ವನಿ ಕೇಳಿಸದಷ್ಟು ದೂರದಲ್ಲಿ ಇರಬೇಕು ಎಂದು ನ್ಯಾಯಾಲಯ ಹೇಳಿದೆ.
ವಿಚಾರಣೆಯ ಸಮಯದಲ್ಲಿ ವಕೀಲರು ಆರೋಪಿಯೊಂದಿಗೆ ಯಾವುದೇ ಸಮಾಲೋಚನೆ ನಡೆಸಬಾರದು, ವಕೀಲರು ಯಾವುದೇ ರೀತಿಯಲ್ಲಿ ತನಿಖೆಯಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ನ್ಯಾಯಾಲಯ ಸೂಚಿಸಿದೆ.
ಸುಮಾರು ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಬುಧವಾರ ಪಿಎಂಎಲ್‌ಎ ಅಡಿಯಲ್ಲಿ ಮಲಿಕ್ ಅವರನ್ನು ಬಂಧಿಸಲಾಯಿತು. ಇಡಿ ಪ್ರಕರಣವು ಪರಾರಿಯಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಇತರರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇತ್ತೀಚೆಗೆ ದಾಖಲಿಸಿದ ಎಫ್‌ಐಆರ್ ಅನ್ನು ಆಧರಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ