1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಪರೀಕ್ಷೆ:ಫೆ.28ರಿಂದ ಪ್ರವೇಶ ಪತ್ರ ಲಭ್ಯ

ಬೆಂಗಳೂರು: ರಾಜ್ಯದಲ್ಲಿ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಮಾರ್ಚ್ ಮಧ್ಯಭಾಗದಲ್ಲಿ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರವೇಶ ಪತ್ರವನ್ನು ಫೆ.28ರಿಂದ http://kea.kar.nic.in ಜಾಲತಾಣದಲ್ಲಿ ಡೌನ್-ಲೋಡ್ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ರಮ್ಯಾ ತಿಳಿಸಿದ್ದಾರೆ.

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ವಸ್ತ್ರಸಂಹಿತೆಯನ್ನೂ ನಿಗದಿಪಡಿಸಿದ್ದು, ನಿಷೇಧಿತ ವಸ್ತುಗಳ ಪಟ್ಟಿಯನ್ನೂ ತಿಳಿಸಲಾಗಿದೆ. ಈ ಪರೀಕ್ಷೆಯು ಮಾರ್ಚ್ 12ರಿಂದ 16ರ ವರೆಗೆ ನಡೆಯಲಿದೆ.ಈ ಬಗ್ಗೆ ಶನಿವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಇತ್ತೀಚಿನ 2 ಭಾವಚಿತ್ರ, ಪ್ರವೇಶಪತ್ರ, ಗುರುತಿನ ಚೀಟಿಗಳನ್ನು ಕಡ್ಡಾಯವಾಗಿ ತರಬೇಕು ಎಂದು ತಿಳಿಸಿದ್ದಾರೆ.
ನಿಗದಿತ ವಸ್ತ್ರ ಸಂಹಿತೆ ಕಡ್ಡಾಯ :
ಪರೀಕ್ಷೆ ಬರೆಯಲಿರುವ ಪುರುಷ ಅಭ್ಯರ್ಥಿಗಳಿಗೆ ಕೋವಿಡ್ ಮಾರ್ಗದರ್ಶಿ ಸೂತ್ರಗಳ ಹಿನ್ನೆಲೆಯಲ್ಲಿ ಅರೆಪಾರದರ್ಶಕ ಸರ್ಜಿಕಲ್ ಮಾಸ್ಕ್ (ಎನ್-95 ಮತ್ತು ಇತರ ಬಗೆಯ ಮಾಸ್ಕ್ ನಿಷಿದ್ಧ) ಅರೆದೋಳಿನ ಅಂಗಿ ಮತ್ತು ಸಾದಾ ಪ್ಯಾಂಟ್ ಹಾಗೂ ಚಪ್ಪಲಿಗಳನ್ನು ಕಡ್ಡಾಯಗೊಳಿಸಲಾಗಿದೆ. ಹಾಗೆಯೇ, ಮಹಿಳಾ ಅಭ್ಯರ್ಥಿಗಳಿಗೆ ಸರ್ಜಿಕಲ್ ಮಾಸ್ಕ್, ಅರೆದೋಳಿನ ಉಡುಪುಗಳನ್ನು ಸೂಚಿಸಲಾಗಿದೆ.

ಪುರುಷರಾಗಲಿ, ಮಹಿಳೆಯರಾಗಲಿ ತುಂಬುದೋಳಿನ ಉಡುಪು, ಶೂ, ಆಭರಣ (ಪದಕ, ಮೂಗುಬೊಟ್ಟು, ಕಿವಿಯೋಲೆ, ನೆಕ್ಲೇಸ್, ಬ್ರೇಸ್ಲೆಟ್) ಮತ್ತು ಆಲಂಕಾರಿಕ ಉಡುಪುಗಳನ್ನು ಧರಿಸಿಕೊಂಡು ಬರುವುದನ್ನು ನಿಷೇಧಿಸಲಾಗಿದೆ. ಅಭ್ಯರ್ಥಿಗಳಿಗೆ ಯಾವುದೇ ಬ್ರ್ಯಾಂಡ್ ನ ಹೆಸರಿಲ್ಲದ ಸಾದಾ ಬಾಟಲಿಯಲ್ಲಿ ಕುಡಿಯುವ ನೀರನ್ನು ಪರೀಕ್ಷಾ ಕೊಠಡಿಗೆ ತೆಗೆದುಕೊಂಡು ಬರಲು ಅವಕಾಶ ಕೊಡಲಾಗಿದೆ ಎಂದು ಪ್ರಾಧಿಕಾರವು ಮಾಹಿತಿ ನೀಡಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

ಪರೀಕ್ಷಾ ಕೊಠಡಿಗೆ ಅಭ್ಯರ್ಥಿಗಳು ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳು (ಮೊಬೈಲ್, ಪೆನ್ ಡ್ರೈವ್, ಇಯರ್ ಫೋನ್, ಮೈಕ್ರೋಫೋನ್, ಬ್ಲೂಟೂತ್, ಕೈ ಗಡಿಯಾರ), ಆಹಾರ ಪದಾರ್ಥಗಳು, ಸ್ಟೇಷನರಿ ವಸ್ತುಗಳು (ಪೆನ್ಸಿಲ್, ಕಾಗದ, ಎರೇಸರ್, ಇಂಚುಪಟ್ಟಿ, ಜಾಮಿಟ್ರಿ ಪೆಟ್ಟಿಗೆ, ಕ್ಯಾಲ್ಕುಲೇಟರ್, ಲಾಗ್ ಟೇಬಲ್) ಮತ್ತು ವೈಯಕ್ತಿಕ ವಸ್ತುಗಳನ್ನು (ವ್ಯಾಲೆಟ್, ಅಲಂಕಾರಿಕ ಕನ್ನಡಕ, ಬೆಲ್ಟ್, ಟೋಪಿ, ಕ್ಯಾಮರಾ, ಆಭರಣಗಳು) ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement