ಕರ್ನಾಟಕ ಬಜೆಟ್‌ 2022-23 : 15 ಸಾವಿರ ಶಿಕ್ಷಕರು, 27 ಸಾವಿರ ಅತಿಥಿ ಶಿಕ್ಷಕರ ನೇಮಕ, ಕಟ್ಟಡ ಕಾರ್ಮಿಕರಿಗೆ ರಾಜ್ಯಾದ್ಯಂತ ರಿಯಾಯ್ತಿ ಬಸ್‌ ಪಾಸ್‌ ಘೋಷಣೆ

ಬೆಂಗಳೂರು: ಈ ಬಾರಿಯ ಬಜೆಟ್​ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಓತ್ತು ನೀಡಲಾಗಿದೆ. 15 ಸಾವಿರ ಶಿಕ್ಷಕರ ನೇಮಕ ಆಗುವ ವರೆಗೆ ಶಿಕ್ಷಕರ ಖಾಲಿ ಹುದ್ದೆಗಳಿಗೆ ಸುಮಾರು 27,000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್​ನಲ್ಲಿ ಪ್ರಸ್ತಾಪಿಸಿದ್ದಾರೆ.
ಅಲ್ಲದೆ, ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಬೋಧನಾ ಅವಧಿಯನ್ನು ಹೆಚ್ಚಿಸಿ ಮಾಸಿಕ ಗೌರವಧನವನ್ನು 32,000 ರೂ.ಗೆ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ 2020ರ ಮಾರ್ಗಸೂಚಿಯಂತೆ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣ, ಶಿಕ್ಷಕರ ಶಿಕ್ಷಣ ಹಾಗೂ ವಯಸ್ಕರ ಶಿಕ್ಷಣ ಕ್ಷೇತ್ರಗಳಿಗೆ ನೂತನ ಪಠ್ಯ ಕ್ರಮ ರಚಿಸಲಾಗುವುದು ಎಂದು ಹೇಳಿದರು. ಅಲ್ಲದೇ ಮುಂದಿನ ವರ್ಷದಿಂದ ಎನ್ ಇಪಿ ರಾಜ್ಯಾದ್ಯಂತ ಜಾರಿಯಾಗಲಿದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ದಿಗೆ 500 ಕೋಟಿ ರೂ ಅನುದಾನ ನಿಗದಿ ಪಡಿಸಲಾಗಿದ್ದು, ಇದು ರಾಜ್ಯದಲ್ಲಿ ಮೊದಲ ಬಾರಿಗೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಕೆ.ಪಿ.ಎಸ್.ಸಿ., ಯು.ಪಿ.ಎಸ್.ಸಿ., ಎಸ್.ಎಸ್.ಸಿ., ಬ್ಯಾಂಕಿಂಗ್, ರೈಲ್ವೆ, ಸಿ.ಡಿ.ಎಸ್., ನೀಟ್, ಜೆಇಇ ಮುಂತಾದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ‘ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿನಿ’ ಎಂಬ ಹೊಸ ಯೋಜನೆಯಡಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ವೇದಿಕೆಯ ಮೂಲಕ ಉಚಿತ ಕೋಚಿಂಗ್ ಸೌಲಭ್ಯ ನೀಡಲಾಗುತ್ತದೆ ಎಂದು ಹೇಳಿದರು.
ಬಡವರಿಗೆ ಕೂಡ ವೈದ್ಯಕೀಯ ಶಿಕ್ಷಣ ಅವಕಾಶ ನೀಡುವ ನಿಟ್ಟಿನಲ್ಲಿ ಎಲ್ಲ ತಾಲೂಕಿನಲ್ಲಿ ನೀಟ್ ಪರೀಕ್ಷಾ ತರಬೇತಿ, ವೈದ್ಯಕೀಯ ಶಿಕ್ಷಣ ಪಡೆಯಲು ಇಚ್ಛಿಸುವ ಬಡ ವಿದ್ಯಾರ್ಥಿಗಳಿಗೆ ಬ್ಯಾಂಕ್‌ನಿಂದ ಶೈಕ್ಷಣಿಕ ಸಾಲದ ನೆರವು ನೀಡಲು ಸರ್ಕಾರ ಮುಂದಾಗಿದೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

ಆಯ್ದ ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಲಾಗುತ್ತದೆ. ರಾಜ್ಯಾದ್ಯಂತ ಡಿಜಿಟಲ್​ ಗ್ರಂಥಾಲಯ ಸ್ಥಾಪನೆ, ಪ್ರತೀ ವರ್ಷ ಶಿಕ್ಷಕರಿಗೆ ಪುಲೆ ಪ್ರಶಸ್ತಿ ನೀಡುವುದಾಗಿ ಘೋಷಣೆ ಮಾಡಲಾಗಿದೆ.
ರಾಜ್ಯದ ಏಳು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಕರ್ನಾಟಕ ತಂತ್ರಜ್ಞಾನ ಸಂಸ್ಥೆಗಳನ್ನಾಗಿ ಉನ್ನತೀಕರಣ ಮಾಡಲು ವಿದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಚಾಮರಾಜನಗರ, ಬೀದರ್ , ಹಾವೇರಿ , ಹಾಸನ, ಕೊಡಗು , ಕೊಪ್ಪಳ ಮತ್ತು ಬಾಗಲಕೋಟೆಯಲ್ಲಿ ವಿನೂತನ ವಿಶ್ವವಿದ್ಯಾಲಯಗಳ ಸ್ಥಾಪನೆ ಮಾಡಲಾಗುತ್ತದೆ ಎಂದು ಬಜೆಟ್‌ನಲ್ಲಿ ಬಸವರಾಜ ಬೊಮ್ಮಾಯಿ ಪ್ರಸ್ತಾಪಿಸಿದ್ದಾರೆ.
ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಪೀಠೋಪಕರಣ ಒದಗಿಸಲು 100 ಕೋಟಿ ರೂ ಮೀಸಲಿಡಲಾಗಿದೆ. ‘ನೋಡಿ ಕಲಿ ಮಾಡಿ ತಿಳಿ’ ಯೋಜನೆಯಡಿ ಕರ್ನಾಟಕದ 169 ಸರ್ಕಾರಿ ಬಾಲಕಿಯರ ಪ್ರೌಢಶಾಲೆಗಳಿಗೆ ಲ್ಯಾಬ್ -ಇನ್-ಎ-ಕಿಟ್ ವಿತರಣೆ ಮಾಡಲು ಕಾರ್ಯಕ್ರಮ ರೂಪಿಸಲಾಗಿದೆ.
ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳನ್ನು ಜಿಲ್ಲಾ ಮಟ್ಟದಲ್ಲಿ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ. ಜೊತೆಗೆ ತುಮಕೂರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿಯನ್ನು ಪ್ರಾರಂಭಿಸಲಾಗುತ್ತದೆ. ಸವಣೂರಿನಲ್ಲಿ ಹೊಸ ಆಯುರ್ವೆದ ಕಾಲೇಜು ಸ್ಥಾಪಿಸಲು ಯೋಜನೆ ಹಾಕಿಕೊಳ್ಳಲಾಗಿದೆ.
ಶ್ರೀಮತಿ ಸಾವಿತ್ರಿಬಾಯಿ ಫುಲೆ ಅವರ ಹೆಸರಿನಲ್ಲಿ ರಾಜ್ಯಮಟ್ಟದ ‘ಆದರ್ಶ ಶಿಕ್ಷಕ/ಶಿಕ್ಷಕಿ’ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುವುದು. ಹಂಪಿ ಕನ್ನಡ ವಿಶ್ವವಿದ್ಯಾಲಯವನ್ನು ಇನ್ನಷ್ಟು ಬಲಪಡಿಸಲು ಹಾಗೂ ಮತ್ತಷ್ಟು ರಚನಾತ್ಮಕ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

ಈವರೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ಕಟ್ಟಡ ಕಾರ್ಮಿಕರಿಗೆ ಬಿಎಂಟಿಸಿ ಬಸ್ ಗಳಲ್ಲಿ ಸಂಚರಿಸೋದಕ್ಕಾಗಿ ಉಚಿತ ರಿಯಾಯಿತಿ ಬಸ್ ಪಾಸ್ ನೀಡಲಾಗುತ್ತಿತ್ತು. ಇನ್ಮುಂದೆ ರಾಜ್ಯಾಧ್ಯಂತ ಕಟ್ಟಡ ಕಾರ್ಮಿಕರಿಗೆ ರಿಯಾಯ್ತಿ ಬಸ್ ಪಾಸ್ ವಿತರಿಸಲಾಗುತ್ತಿದೆ.
ಬಜೆಟ್ ನಲ್ಲಿ ಬಸವರಾಜ ಬೊಮ್ಮಾಯಿ ಈ ಯೋಜನೆ ಘೋಷಣೆ ಮಾಡಿದ್ದಾರೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕಟ್ಟಡ ಕಾರ್ಮಿಕರಿಗೆ ರಿಯಾಯ್ತಿ ಬಸ್ ಪಾಸ್ ಯೋಜನೆಯನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಘೋಷಿಸಿದ್ದಾರೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement