ಅಂತಾರಾಜ್ಯ ಜಲವಿವಾದ ಕಾಯ್ದೆಗೆ ತಿದ್ದುಪಡಿ ಅಗತ್ಯ : ಸಿಎಂ ಬೊಮ್ಮಾಯಿ ಪ್ರತಿಪಾದನೆ

ಬೆಂಗಳೂರು: ರಾಜ್ಯಗಳ ಜಲ ವಿವಾದಗಳಿಗೆ ಅಂತ್ಯ ಹಾಡಲು ಅಂತಾರಾಜ್ಯ ಜಲವಿವಾದ ಕಾಯ್ದೆಗೆ ಸಂಪೂರ್ಣವಾಗಿ ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಪಾದಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ಜಲ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಗಳ ಕುರಿತಂತೆ ದಕ್ಷಿಣ ಭಾರತದ ರಾಜ್ಯಗಳ ಪ್ರಾದೇಶಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜಲ ವಿವಾದಗಳಿಗೆ ಸಂಬಂಧಿಸಿದಂತೆ ಸಂಕುಚಿತ ರಾಜಕಾರಣದ ಬದಲಿಗೆ ಹೆಚ್ಚು ಜನರಿಗೆ ನೀರು ಸಿಗುವಂತಾಗಲು ಕಾಯ್ದೆಯಲ್ಲಿ ತಿದ್ದುಪಡಿ ತರಬೇಕು. ನದಿ ಪಾತ್ರಗಳ ಸೂಕ್ತ ನಿರ್ವಹಣೆ ಮಾತ್ರ ಇದಕ್ಕೆ ಪರಿಹಾರ ಎಂದು ಅಭಿಪ್ರಾಯಪಟ್ಟರು.

ನೀರಾವರಿ ಮಾರ್ಗಗಳಲ್ಲಿ ನೀರು ದುರುಪಯೋಗವಾಗುತ್ತಿದೆ. ರಾಷ್ಟ್ರ ಮಟ್ಟದಲ್ಲಿ ನೀರಿನ ಕಾಲುವೆಗಳ ಸಾಮರ್ಥ್ಯ ಶೇ.45ರಷ್ಟಿದೆ. ಈ ಕಾಲುವೆಗಳಲ್ಲಿ ನೀರು ಹರಿಸುವ ಸಾಮರ್ಥ್ಯದಲ್ಲಿ ಶೇ.55ರಷ್ಟು ಅಂತರವಿದೆ. ಇವುಗಳನ್ನು ಸರಿಪಡಿಸಿದರೆ ಹೆಚ್ಚಿನ ನೀರು ಲಭ್ಯವಾಗಲಿದೆ. ನೀರಿನ ಝರಿಗಳನ್ನು ಜೀವಂತವಾಗಿಡುವ ಜಲಾನಯನ ಯೋಜನೆಗಳ ಬಗ್ಗೆ ಆಲೋಚಿಸುತ್ತಿಲ್ಲ.ನಮ್ಮ ಬಹುತೇಕ ಯೋಜನೆಗಳು ನೀರಿನ ಹರಿವಿಗೆ ತಡೆಯೊಡ್ಡುತ್ತಿವೆ. ನಾವು ನೀರು ವ್ಯರ್ಥವಾಗಿ ಸಮುದ್ರ ಸೇರುತ್ತದೆ ಎಂದೆಲ್ಲ ಹೇಳುತ್ತೇವೆ. ಆದರೆ ನಾವು ನಿಸರ್ಗ ಹಾಗೂ ವಿಜ್ಞಾನವನ್ನು ಮರೆಯುತ್ತಿದ್ದೇವೆ. ಕನಿಷ್ಠ ಶೇ.30 ರಷ್ಟು ಸಿಹಿ ನೀರು ಸಮುದ್ರ ಸೇರಿದರೆ ಮಾತ್ರ ಶೇ.60 ರಷ್ಟು ಉಪ್ಪು ನೀರು ಆವಿಯಾಗಲು ಸಾಧ್ಯವಾಗಿ ಮಳೆಯಾಗುತ್ತದೆ. ಹಾಗಾಗಿ ಉತ್ತಮ ಮಳೆಯಾಗುವ ಈ ಸರಳ ಸತ್ಯದ ಅರಿವನ್ನು ಗಮನದಲ್ಲಿಟ್ಟುಕೊಂಡು ಜಲ ಯೋಜನೆಗಳನ್ನು ರೂಪಿಸಬೇಕು ಎಂದರು.
ಪರಿಸರದ ಸವಾಲುಗಳನ್ನು ನಾವು ಎದುರಿಸಬೇಕಿದೆ. ನದಿಗಳು ಈಗ ಋತುಕಾಲಿಕವಾಗಿವೆ. ಸದಾ ಹರಿಯುವ ನದಿಗಳು ಈಗಿಲ್ಲದಂತಾಗಿದೆ. ನದಿಗಳು ಸಮುದ್ರವನ್ನೇ ಸೇರದೆ. ಮಧ್ಯದಲ್ಲಿಯೇ ಒಣಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

ರಾಜ್ಯದಲ್ಲಿ ಜಲಜೀವನ್ ಮಿಷನ್ ಯೋಜನೆಯನ್ನು ಅನುಷ್ಠಾನ ಮಾಡಲು ಅವಿರತವಾಗಿ ಶ್ರಮಿಸಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ ನೀಡಿದರು. 97.91 ಲಕ್ಷ ಗ್ರಾಮೀಣ ಮನೆಗಳಿವೆ. ಪ್ರಾರಂಭದಲ್ಲಿ 25 ಲಕ್ಷ ಮನೆಗಳಿಗೆ ನಲ್ಲಿ ಅಳವಡಿಸಲು ಯೋಜಿಸಲಾಗಿತ್ತು. ಈಗ 18 ಲಕ್ಷವಾಗಿದೆ. ಕೆಲವೇ ತಿಂಗಳುಗಳಲ್ಲಿ ಗುರಿ ಮುಟ್ಟಲಾಗುವುದು ಎಂದರು.
ನಿಗದಿತ ಸಮಯದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲು ವೇಗ ಹೆಚ್ಚಿಸಿ 25 ಲಕ್ಷ ಮನೆಗಳಿಗೆ ಸಂಪರ್ಕ ಒದಗಿಸುವ ಗುರಿಯನ್ನು 2-3 ತಿಂಗಳೊಳಗೆ ಮುಟ್ಟಲಾಗುವುದು. ಮುಂದಿನ ವರ್ಷದ ಗುರಿಯನ್ನು ಶೇ.100 ರಷ್ಟು ಮುಟ್ಟಲು ಸಹ ಈಗಾಗಲೇ ಕಾರ್ಯತಂತ್ರ ರೂಪಿಸಲಾಗಿದೆ ಎಂದರು.
ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ನೀರು ಸರಬರಾಜಿಗೆ ಸೂಕ್ತ ವ್ಯವಸ್ಥೆಗಳಿಲ್ಲ. ಜಲ ನಿರ್ವಹಣೆಯನ್ನು ಪುನರ್ ಪರಿಶೀಲಿಸುವ ಅಗತ್ಯವಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿರುವ ಪ್ರಥಮ ಪ್ರಧಾನಿಗಳು. ಜಲಜೀವನ್ ಮಿಷನ್ ಯೋಜನೆಯಲ್ಲ. ಇದೊಂದು ಗುರಿ. ಕಟ್ಟಕಡೆಯ ವ್ಯಕ್ತಿಗೆ ನೀರು ತಲುಪಿಸುವ ಹೊಣೆ ನಮ್ಮ ಮೇಲಿದೆ ಎಂದು ಹೇಳಿದರು.
.ಕಾರ್ಯಕ್ರಮದಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಸಚಿವರಾದ ಡಾ.ಸಿ.ಎನ್.ಅಶ್ವಥನಾರಾಯಣ ಹಾಗೂ ವಿವಿಧ ರಾಜ್ಯಗಳ ಸಚಿವರು, ಪ್ರತಿನಿಗಳು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement