ಉಕ್ರೇನ್‌ನಲ್ಲಿ ಸಿಲುಕಿರುವ ಎಲ್ಲ ಕನ್ನಡಿಗರನ್ನು ಕರೆತರಲು ಸತತ ಪ್ರಯತ್ನ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಕರ್ನಾಟಕದ ಇನ್ನೂರಕ್ಕೂ ಹೆಚ್ಚು ಜನರು ಬಂಕರ್‌ಗಳಲ್ಲಿ ಆಶ್ರಯ ಪಡಿದಿದ್ದು, ಅವರನ್ನು ಸುರಕ್ಷಿತವಾಗಿ ಮರಳಿ ಕರೆತರುವ ಕಾರ್ಯ ಮುಂದುವರೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿಂದು ಉಕ್ರೇನ್‌ನಿಂದ ಮರಳಿ ತಾಯ್ನಾಡಿಗೆ ಆಗಮಿಸಿದ ಕುಂದಗೋಳ ತಾಲೂಕು ಯರಗುಪ್ಪಿ ಗ್ರಾಮದ ವಿದ್ಯಾರ್ಥಿನಿ ಚೈತ್ರಾ ಸಂಶಿಯನ್ನು ಸ್ವಾಗತಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಕೆಲವರು ಯುದ್ಧ ಭೂಮಿಯಿಂದ ಸ್ವಲ್ಪ ದೂರವಿದ್ದಾರೆ. ಬಂಕರ್ ಗಳಲ್ಲಿಯೂ ೨೦೦ ಕ್ಕಿಂತ ಹೆಚ್ಚು ಜನರಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನ ನಡೆದಿದೆ. ಕರೆತರುವ ಸಂಬಂಧ ನಮ್ಮ ದೇಶದ ರಾಯಭಾರಿ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ.
ಅಲ್ಲಿ ಸಿಲುಕಿದ್ದ ಧಾರವಾಡ ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳ ಪೈಕಿ, ಇಬ್ಬರು ವಾಪಸ್‌ ಬಂದಿದ್ದು ಇನ್ನಿಬ್ಬರು ಉಕ್ರೇನ್ ಗಡಿ ದಾಟಿದ್ದಾರೆ. ಅವರು ಶೀಘ್ರವೇ ದೇಶಕ್ಕೆ ಮರಳುತ್ತಾರೆ ಎಂದು ಬೊಮ್ಮಾಯಿ ಹೇಳಿದರು.
ವೈದ್ಯಕೀಯ ವಿದ್ಯಾರ್ಥಿ ಚೈತ್ರಾ ಸಂಶಿ ಏಳು ದಿನ ಹಾಸ್ಟೇಲ್‌ನ ಬಂಕರ್‌ನಲ್ಲಿದ್ದರು. ಸುಮಾರು ೧೦ ಕಿ.ಮೀ. ನಡೆದು ಪೊಲೆಂಡ್ ಗಡಿಗೆ ಬಂದು ಭಾರತ ಸರ್ಕಾರದ ವ್ಯವಸ್ಥೆಯಿಂದ ತಾಯ್ನಾಡಿಗೆ ಬಂದು ತಲುಪಿದ್ದಾರೆ ಎಂದರು.

ಪ್ರಮುಖ ಸುದ್ದಿ :-   ಭಟ್ಕಳ : ಮೀನುಗಾರಿಕಾ ಬೋಟ್ ಮುಳುಗಡೆ

ಕೇಂದ್ರಕ್ಕೆ ಚೈತ್ರಾ ಧನ್ಯವಾದ
ನಿರಂತರ ಬಾಂಬ್ ದಾಳಿ, ಶೆಲ್ ದಾಳಿಯಿಂದ ಜರ್ಜರಿತವಾಗಿರುವ ಉಕ್ರೇನ್ ನಿಂದ ಮರಳಿ ತಮ್ಮನ್ನು ತಾಯ್ನಾಡಿಗೆ ಸುರಕ್ಷಿತವಾಗಿ ಕರೆತಂದುದಕ್ಕಾಗಿ ತಾನು ಕೇಂದ್ರ, ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುವುದಾಗಿ ಕುಂದಗೋಳ ತಾಲೂಕ ಯರಗುಪ್ಪಿ ಗ್ರಾಮದ ಚೈತ್ರಾ ಸಂಶಿ ಹೇಳಿದರು.
ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಭಾರತೀಯ ರಾಯಭಾರಿ ಕಚೇರಿ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡುತ್ತಿದೆ ಎಂದರು.
ಬಂಕರ್ ಗಳಲ್ಲಿ ರಕ್ಷಣೆ ಪಡೆದಿದ್ದಾಗ ಊಟ, ನೀರು ಸಿಗುತ್ತಿರಲಿಲ್ಲ, ಅಲ್ಲಿ ಏಳು ದಿನ ಕಳೆದ ಮೇಲೆ ಏರ್ ಲಿಫ್ಟಿಂಗ್ ಕಾರ್ಯ ಆರಂಭವಾಯಿತು. ಯುನಿವರ್ಸಿಟಿಯವರ ನೆರವಿನಿಂದ ಹೊರಬಂದು ಲಿವಿವ್ ತಲುಪಿದ ನಂತರ ಅಲ್ಲಿಂದ ಪೋಲ್ಯಾಂಡ್‌ಗೆ ಬಂದೆವು. ಅಲ್ಲಿಂದ ಹೊರಬಂದು ತಾಯ್ನಾಡು ತಲುಪುವವರೆಗೂ ಅದೊಂದು ಅತೀ ಕಷ್ಟದ ಸಮಯವಾಗಿತ್ತು ಎಂದು ಚೈತ್ರಾ ಹೇಳಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement