ಮುಂಬೈ: ಎನ್‌ಎಸ್‌ಇ ಕೋ-ಲೊಕೇಷನ್ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿರುವ ಎನ್‌ಎಸ್‌ಇ ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ ಅವರನ್ನು ವಿಶೇಷ ನ್ಯಾಯಾಲಯ ಸೋಮವಾರ 7 ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ.
ತನಿಖೆಯ ವೇಳೆ ರಾಮಕೃಷ್ಣ ಅವರು ಸಹಕರಿಸದೆ ತಪ್ಪಿಸಿಕೊಳ್ಳುತ್ತಿದ್ದರು ಎಂದು ಹೇಳಿ ಸಿಬಿಐ 14 ದಿನಗಳ ಕಸ್ಟಡಿಗೆ ಕೋರಿತ್ತು.
ಪ್ರಕರಣದ ಸಂಬಂಧ ಚಿತ್ರಾ ರಾಮಕೃಷ್ಣ ಅವರನ್ನು ಭಾನುವಾರ ರಾತ್ರಿ ಬಂಧನ ಮಾಡಲಾಗಿತ್ತು. ಕಳೆದ ತಿಂಗಳು ಮೂರು ದಿನಗಳ ಕಾಲ ಸಿಬಿಐ ವಿಚಾರಣೆ ನಡೆಸಿತ್ತು. ಅಲ್ಲದೆ, ಫೆಬ್ರವರಿ 24 ಹಾಗೂ 25 ರಂದು ಚಿತ್ರಾ ಅವರಿಗೆ ಸೇರಿದ ಮನೆ ಮೇಲೂ ಸಿಬಿಐ ದಾಳಿ ಮಾಡಿ ದಾಖಲೆಗಳನ್ನು ಸಂಗ್ರಹಿಸುವ ಪ್ರಯತ್ನ ಮಾಡಿತ್ತು.ಆದರೆ ವಿಚಾರಣೆ ಸರಿಯಾಗಿ ಚಿತ್ರಾ ಸ್ಪಂದಿಸಿರಲಿಲ್ಲ ಎಂದು ಸಿಬಿಐ ಹೇಳಿತ್ತು.
ಇದೇ ಪ್ರಕರಣದಲ್ಲಿ ಸಿಬಿಐನಿಂದ ಬಂಧಿತರಾಗಿರುವ ಎನ್‌ಎಸ್‌ಇಯ ಮಾಜಿ ಗ್ರೂಪ್ ಆಪರೇಟಿಂಗ್ ಆಫೀಸರ್ ಆನಂದ್ ಸುಬ್ರಮಣಿಯನ್ ಅವರ ಕಸ್ಟಡಿಯನ್ನು ಮಾರ್ಚ್ 9 ರ ವರೆಗೆ ವಿಸ್ತರಣೆ ಮಾಡಲಾಗಿದೆ. ಇವರನ್ನು ಕಳೆದ ವಾರ ಆರಂಭದಲ್ಲಿ ನಾಲ್ಕು ದಿನಗಳ ಕಾಲ ಸಿಬಿಐ ಅವರನ್ನು ಚೆನ್ನೈನಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿ ನಂತರ ಬಂಧಿಸಿತ್ತು. ಪ್ರಾಥಮಿಕ ತನಿಖೆಗಳ ಪ್ರಕಾರ ಅವರು ಸ್ವತಃ ‘ಹಿಮಾಲಯನ್ ಯೋಗಿ’ ಎಂದು ಹೇಳಲಾಗುತ್ತಿದೆ.
ಆನಂದ್ ಸುಬ್ರಮಣಿಯನ್ ಅವರು ಚಿತ್ರಾ ರಾಮಕೃಷ್ಣ ಅವರ ಸಲಹೆಗಾರರಾಗಿಯೂ ಕೆಲಸ ಮಾಡಿದ್ದರು. ಸಿಬಿಐ 2018ರಲ್ಲಿ ತಾನೇ ದಾಖಲಿಸಿದ್ದ ಎಎಸ್‌ಇ ಕೋ-ಲೊಕೇಷನ್ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ಅದರ ವ್ಯಾಪ್ತಿಯನ್ನು ವಿಸ್ತರಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ