ಸ್ವಾಸ್ಥ್ಯ ಸಮಾಜಕ್ಕೆ ಲಿಂಗ ಸಮಾನತೆ ಅವಶ್ಯ: ವಾಣಿಶ್ರೀ ಪ್ರಸಾದ

ಧಾರವಾಡ: ಸಮಾಜದಲ್ಲಿ ಮಹಿಳೆಯರು, ಪುರುಷರು ಪ್ರತಿಯೊಂದರಲ್ಲೂ ಸರಿ ಸಮಾನರು. ಇದರಲ್ಲಿ ಯಾವುದೇ ಭೇದ-ಭಾವ ಇರಬಾರದು ಎಂದು ಧಾರವಾಡದ ವಾಣಿಶ್ರೀ ಅಜಿತ ಪ್ರಸಾದ ಹೇಳಿದರು.
ವಿದ್ಯಾಗಿರಿಯ ಜೆ.ಎಸ್.ಎಸ್ ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಮಹಿಳೆಯರಿಗೆ ವಿದ್ಯಾಭ್ಯಾಸ, ಉದ್ಯೋಗಾವಕಾಶ ಹೇರಳವಾಗಿ ದೊರೆಯುತ್ತಿದೆ. ಇದರ ಸದುಪಯೋಗ ಪಡೆದು ಕುಟುಂಬ, ಸಮಾಜವನ್ನು ಸದೃಢಗೊಳಿಸುವಲ್ಲಿ ಸ್ತ್ರೀಯರು ಕಾರ್ಯ ಪ್ರವೃತ್ತರಾಗಬೇಕು ಎಂದು ಅವರು ಕರೆ ನೀಡಿದರು.

ಇಂದಿನ ದಿನಗಳಲ್ಲಿ ಎಲ್ಲ ಕಾರ್ಯಕ್ಷೇತ್ರಗಳಲ್ಲಿ ಸ್ತ್ರೀ ಪುರುಷನಿಗೆ ಸರಿ ಸಮನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಂತೂ ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ. ಸ್ತ್ರೀ ಪುರುಷ ಇಬ್ಬರೂ ಕುಟುಂಬ ಹಾಗೂ ಸಮಾಜದ ಏಳ್ಗೆಗಾಗಿ ಶಿವಶಕ್ತಿಯಂತೆ ಪ್ರಯತ್ನ ಶೀಲರಾಗಬೇಕು. ಸರಕಾರ ಈಗಾಗಲೇ ಬೇಟಿ ಬಚಾವೋ, ಬೇಟಿ ಪಡಾವೋ ಎಂಬ ಶೀರ್ಷಿಕೆಯಡಿ ಎಲ್ಲ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಗುರಿ ಇಟ್ಟುಕೊಂಡಿದೆ. ಸೃಷ್ಟಿ, ಸ್ಫೂರ್ತಿ, ಶಕ್ತಿಯ ಪ್ರತಿರೂಪವೇ ಮಹಿಳೆ. ನಾವು ನೀಡುವ ಅತಿ ಶ್ರೇಷ್ಠವಾದ ಉಡುಗೊರೆ ಎಂದರೆ ಅದು ಅವರಿಗೆ ನೀಡುವ ಗೌರವ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ. ಇಂದು ಪಂಡಿತ ಮಾತನಾಡಿ, ಮಹಿಳೆಯರ ಪಾತ್ರ ಸಮಾಜದಲ್ಲಿ ಹಿರಿದು, ಕುಟುಂಬಕ್ಕೆ ಮಹಿಳೆಯೇ ಮುಖ್ಯ. ಮಹಿಳೆ, ಪುರುಷ ಇವರಿಬ್ಬರ ಸಾಂಘಿಕ ನಿರ್ಣಯ ಶಾಂತಿಯುತ ಬದುಕಿಗೆ ಕಾರಣವಾಗುತ್ತದೆ ಎಂದರು.
ಆವಂತಿಕಾ ರೊಟ್ಟಿ ಸ್ವಾಗತಿಸಿದರು. ಡಾ. ನಳಿನಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ರತ್ನಾ ಐರಸಂಗ ಪ್ರಾರ್ಥಿಸಿದರು ಹಾಗೂ ಅತಿಥಿಗಳನ್ನು ಪರಿಚಯಿಸಿದರು. ಡಾ. ಶಿಲ್ಪಾ ಆಡೂರ ವಂದಿಸಿದರು. ಚೇತನಾ ಕೆ ನಿರೂಪಿಸಿದರು.

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement