ನಾನು ಭಯೋತ್ಪಾದಕನಲ್ಲ ಎಂದು ಪಂಜಾಬ್‌ ಜನ ಸಾಬೀತು ಮಾಡಿದ್ದಾರೆ; ಪಂಜಾಬ್​ನಲ್ಲಿ ಆಪ್​ ಗೆಲುವಿಗೆ ಕೇಜ್ರಿವಾಲ್ ಹೇಳಿಕೆ

ನವದೆಹಲಿ: ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ (AAP) ಸಾಧನೆಯನ್ನು ದೊಡ್ಡ ಕ್ರಾಂತಿ ಎಂದು ಬಣ್ಣಿಸಿರುವ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಪಂಜಾಬ್ ಜನರು ನಾನು ಭಯೋತ್ಪಾದಕನಲ್ಲ ಎಂಬುದನ್ನು ಸಾಬೀತು‌ ಪಡಿಸಿದ್ದಾರೆ. ದೆಹಲಿಯಲ್ಲಿ ಮೊದಲು ಸಂಭವಿಸಿದ ಈ ಕ್ರಾಂತಿಯು ಈಗ ಪಂಜಾಬ್‌ಗೆ ಹರಡಿದೆ. ಮುಂದಿನ ದಿನಗಳಲ್ಲಿ ದೇಶದಾದ್ಯಂತ ಹರಡಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಪಕ್ಷದ ಪ್ರಧಾನ ಕಚೇರಿಯಲ್ಲಿ ಆಪ್ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರೀತಿಯ ರಾಜಕಾರಣ ಮಾಡುವಂತೆ ಮನವಿ ಮಾಡಿದ್ದಾರೆ.
ಪಂಜಾಬ್​ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕುವ ಮೂಲಕ ಜನರು “ಕೇಜ್ರಿವಾಲ್ ಭಯೋತ್ಪಾದಕ ಅಲ್ಲ, ಆತ ಈ ದೇಶದ ಮಗ, ನಿಜವಾದ ದೇಶಭಕ್ತ” ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಗೆಲುವಿಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಪಂಜಾಬ್​ನಲ್ಲಿ 117 ವಿಧಾನಸಭಾ ಸ್ಥಾನಗಳಲ್ಲಿ 91 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಘಟಾನುಘಟಿಗಳಾದ ಚರಣ್​ಜೀತ್ ಸಿಂಗ್ ಚನ್ನಿ, ನವಜೋತ್ ಸಿಂಗ್ ಸಿಧು, ಅಮರಿಂದರ್ ಸಿಂಗ್, ಬಿಕ್ರಮ್ ಮಜಿಥಿಯಾ ಅವರನ್ನು ಮತದಾರರು ಸೋಲಿಸಿದ್ದಾರೆ. ಇದು ಜನಸಾಮಾನ್ಯರನ್ನು ಕಡೆಗಣಿಸಬಾರದು ಎಂದುದನ್ನು ತೋರಿಸುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಕಳೆದ 75 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಬ್ರಿಟಿಷರ ವ್ಯವಸ್ಥೆಯನ್ನು ಜೀವಂತವಾಗಿಟ್ಟು, ದೇಶದ ಜನರನ್ನು ಬಡವರು ಮತ್ತು ವಂಚಿತರನ್ನಾಗಿ ಮಾಡಿರುವುದು ದುಃಖಕರವಾಗಿದೆ. ಆಪ್ ಈ ವ್ಯವಸ್ಥೆಯನ್ನು ಬದಲಾಯಿಸಿದೆ. ನಾವು ಪ್ರಾಮಾಣಿಕ ರಾಜಕಾರಣ ಆರಂಭಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಜಮ್ಮು-ಕಾಶ್ಮೀರ : ಮೂವರು ಲಷ್ಕರ್ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement