ಎನ್​ಎಸ್​ಇ ಹಗರಣ: ಚಿತ್ರಾ ರಾಮಕೃಷ್ಣಗೆ 14 ದಿನಗಳ ನ್ಯಾಯಾಂಗ ಬಂಧನ

ನವದೆಹಲಿ: ರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಗಂಭೀರ ಲೋಪ ಎಸಗಿದ್ದಾರೆ ಹಾಗೂ “ಹಿಮಾಲಯನ್ ಯೋಗಿ” ಎಂದು ಕರೆದುಕೊಳ್ಳುವ ವ್ಯಕ್ತಿಯೊಂದಿಗೆ ಷೇರು ಮಾರುಕಟ್ಟೆಗೆ ಸಂಬಂಧಿಸಿದ ಗೌಪ್ಯ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಆರೋಪದ ಮೇರೆ ಸಿಬಿಐನಿಂದ ಬಂಧಿಸಲ್ಪಟ್ಟಿರುವ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (NSE) ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ ಅವವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

2013 ರಿಂದ ಎನ್‌ಎಸ್‌ಇ ಮುಖ್ಯಸ್ಥರಾಗಿದ್ದ 59 ವರ್ಷದ ಚಿತ್ರಾ ರಾಮಕೃಷ್ಣ ಅವರನ್ನು ಕೆಲ ದಿನಗಳ ವಿಚಾರಣೆಯ ನಂತರ, ಫೆಬ್ರವರಿ 24ರಂದು ಕೇಂದ್ರೀಯ ತನಿಖಾ ದಳ (CBI) ಬಂಧಿಸಿತ್ತು. ಕೆಲವು ದಲ್ಲಾಳಿಗಳಿಗೆ ವ್ಯಾಪಾರದಲ್ಲಿ ಅನ್ಯಾಯ ಮಾರ್ಗದಲ್ಲಿ ಲಾಭವನ್ನು ಮಾಡಲು ಅವಕಾಶ ಕೊಟ್ಟ ಪ್ರಕರಣವನ್ನು 2018ರಲ್ಲಿ ದಾಖಲಿಸಲಾಗಿದೆ. ಏಜೆನ್ಸಿಯು ಮಾರುಕಟ್ಟೆ ವಿನಿಮಯ ಕೇಂದ್ರಗಳ ಕಂಪ್ಯೂಟರ್ ಸರ್ವರ್‌ಗಳಿಂದ ಸ್ಟಾಕ್ ಬ್ರೋಕರ್‌ಗಳಿಗೆ “ಕೋ- ಲೊಕೇಷನ್ ಸ್ಕ್ಯಾಮ್” ಎಂದು ಕರೆಯುವ ಮಾಹಿತಿ ಸೋರಿಕೆ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿದೆ.

ಚಿತ್ರಾ ರಾಮಕೃಷ್ಣ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಆದರೆ ಸಿಬಿಐ ಇದನ್ನು ವಿರೋಧಿಸಿತ್ತು, ಚಿತ್ರಾ ಪ್ರಭಾವಿ ವ್ಯಕ್ತಿಯಾಗಿದ್ದು, ಪ್ರಕರಣದ ಇತರ ಅಂಶಗಳ ತನಿಖೆ ಇನ್ನೂ ಪ್ರಗತಿಯಲ್ಲಿದೆ ಎಂದು ಹೇಳಿ ನ್ಯಾಯಾಂಗ ಬಂಧನ ಕೋರಿತು. ಇದಕ್ಕೆ ಸಮ್ಮತಿ ಸೂಚಿಸಿದ ನ್ಯಾಯಾಲಯವು ಮನೆಯ ಆಹಾರ ಮತ್ತು ಇತರ ಸೌಕರ್ಯಗಳಿಗಾಗಿ ಚಿತ್ರಾ ರಾಮಕೃಷ್ಣ ಸಲ್ಲಿಸಿದ ಕೋರಿಕೆಯನ್ನು ತಿರಸ್ಕರಿಸಿತು.
ನ್ಯಾಯಾಲಯವು ಚಿತ್ರಾ ಅವರ ಕೋರಿಕೆಗಳಾದ ಪ್ರಾರ್ಥನಾ ಪುಸ್ತಕಗಳಾದ ಹನುಮಾನ್ ಚಾಲೀಸಾ ಮತ್ತು ಭಗವದ್ಗೀತೆಯ ಪ್ರತಿಯನ್ನು ತೆಗೆದುಕೊಂಡು ಹೋಗಲು ಅವರಿಗೆ ಅನುಮತಿ ನೀಡಿತು.
ಸುಮಾರು 20 ವರ್ಷಗಳ ಕಾಲ ಎಲ್ಲ ವೈಯಕ್ತಿಕ ಮತ್ತು ವೃತ್ತಿಪರ ವಿಷಯಗಳಲ್ಲಿ ನಿಗೂಢ “ಹಿಮಾಲಯನ್ ಯೋಗಿ” ಅವರಿಂದ ಮಾರ್ಗದರ್ಶನ ಪಡೆದಿದ್ದಾರೆ ಎಂದು ವರದಿ ಹೇಳಿದೆ. ಆ ನಂತರ “ಯೋಗಿ”ಯೇ ಆನಂದ್ ಸುಬ್ರಮಣಿಯನ್ ಎಂದು ಬಹಿರಂಗಪಡಿಸಲಾಗಿದ್ದು, ಮಾರುಕಟ್ಟೆ ತಿರುಚಿದ ಪ್ರಕರಣದಲ್ಲಿ ವಿನಿಮಯ ಕೇಂದ್ರದ ಈ ಮಾಜಿ ಅಧಿಕಾರಿಯನ್ನೂ ಬಂಧಿಸಲಾಗಿದೆ.

ಪ್ರಮುಖ ಸುದ್ದಿ :-   ಆಪರೇಶನ್‌ ಸಿಂಧೂರ : ಪಾಕಿಸ್ತಾನದ ವಾಯುನೆಲೆಗಳ ಮೇಲಿನ ದಾಳಿಯಲ್ಲಿ 20% ಮೂಲಸೌಕರ್ಯ; ಹಲವಾರು ಯುದ್ಧ ವಿಮಾನಗಳು ನಾಶ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement