ಹಿಜಾಬ್‌ ನಿಷೇಧ: ಹೈಕೋರ್ಟ್ ತೀರ್ಪು ಪಾಲಿಸಿ, ಕಾಲೇಜುಗಳಿಗೆ ಮರಳಿ ಬನ್ನಿ- ಶಿಕ್ಷಣ ಸಚಿವ ನಾಗೇಶ ಮನವಿ

ಬೆಂಗಳೂರು: ಹಿಜಾಬ್‌ ಕುರಿತು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ, ವಸ್ತ್ರಸಂಹಿತೆಗೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳಿಗೂ ನ್ಯಾಯಾಲಯ ಇಂದು ತನ್ನ ತೀರ್ಪಿನ ಮೂಲಕ ಉತ್ತರ ನೀಡಿದೆ ಎಂದು ಹೇಳಿದರು.
ಎಲ್ಲ ವಿದ್ಯಾರ್ಥಿಗಳು ಮತ್ತು ಪೋಷಕರು ಹೈಕೋರ್ಟ್ ತೀರ್ಪು ಪಾಲಿಸಬೇಕು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಬೇಕು.ಶಾಲೆ-ಕಾಲೇಜುಗಳಿಂದ ದೂರ ಉಳಿದಿರುವ ವಿದ್ಯಾರ್ಥಿನಿಯರು ಮತ್ತೆ ಶಿಕ್ಷಣ ಸಂಸ್ಥೆಗಳಿಗೆ ಬರಬೇಕು ಎಂದು ಮನವಿ ಮಾಡಿದರು.

ನ್ಯಾಯಾಲಯದ ತೀರ್ಪು ಏನು ಬಂದರೂ ಗೌರವಿಸುತ್ತೇನೆ ಎಂದು ಈ ಮೊದಲು ಹೇಳಿದ್ದೆ. ಇಂದಿಗೂ ನನ್ನದು ಅದೇ ನಿಲುವು. ಬಿಜೆಪಿ ಸರ್ಕಾರ ಸದಾ ನ್ಯಾಯಾಲಯದ ತೀರ್ಪುಗಳನ್ನು ಗೌರವಿಸುತ್ತದೆ. ಇದು ಐತಿಹಾಸಿಕ ತೀರ್ಪು. ಈ ತೀರ್ಪಿನ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಸರ್ಕಾರವು ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ಇರುವ ಕೆಲ ಗೊಂದಲಗಳನ್ನು ಸರಿಪಡಿಸಲು ಪ್ರಯತ್ನಿಸಲಿದೆ ಎಂದು ಹೇಳಿದರು.

ಸಮವಸ್ತ್ರ ಎನ್ನುವುದು ರಾಷ್ಟ್ರೀಯತೆ ಹಾಗೂ ಸಮಾನತೆ ತರುವುದರಲ್ಲಿ ಸಾಕಷ್ಟು ಸಹಕಾರಿ. ಈ ವಿಷಯ ಹಲವು ವರ್ಷಗಳಿಂದ ನಮಗೆ ಮನವರಿಕೆಯಾಗಿದೆ. ಕೆಲ ಹೆಣ್ಣುಮಕ್ಕಳು ಮಿಸ್​ಗೈಡ್ ಆಗಿದ್ದಾರೆ. ಅವರ ಮನವೊಲಿಸಿ ವಿದ್ಯಾಭ್ಯಾಸ ಮುಂದುವರಿಸಲು ಪ್ರೇರಣೆ ಕೊಡುತ್ತೇವೆ. ಕರ್ನಾಟಕದ ಜನರು ಈ ಹಿಂದೆಯೂ ನ್ಯಾಯಾಲಯದ ತೀರ್ಪು ಗೌರವಿಸಿದ್ದಾರೆ. ಈ ವಿದ್ಯಾರ್ಥಿನಿಯರು ಮುಂದಿನ ದಿನಗಳಲ್ಲಿ ಶಾಲೆಗಳಿಗೆ ಬರುತ್ತಾರೆ ಎಂದು ವಿಶ್ವಾಸವಿದೆ ಎಂದರು.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement