ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್(TMC) ಪಕ್ಷದ ನಾಯಕರೊಬ್ಬರು ಸಾರ್ವಜನಿಕ ಸಭೆಯೊಂದರಲ್ಲಿ ಬಿಹಾರದ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಮಾತನಾಡಿರುವುದು ಊಈಗ ವಿವಾದಕ್ಕೆ ಕಾರಣವಾಗಿದೆ.
ತೃಣಮೂಲ ಕಾಂಗ್ರೆಸ್ ಶಾಸಕ ಮನೋರಂಜನ್ ಬೈಪಾರಿ ಅವರು ಬಿಹಾರದ ಜನರನ್ನು “ಬಿಮಾರಿ” ಅಥವಾ ರೋಗಿಗಳು ಎಂದು ಕರೆದಿದ್ದಾರೆ. ಹಾಗೂ ಬಂಗಾಳವನ್ನು “ರೋಗ ಮುಕ್ತ” ರಾಜ್ಯ ಎಂದು ಹೇಳಿಕೆ ನೀಡಿದ್ದು, ಈ ವಿಡಿಯೋ ವೈರಲ್ ಆಗಿದೆ.
ಬಂಗಾಳಿ ರಕ್ತವು ನಿಮ್ಮ ರಕ್ತನಾಳಗಳಲ್ಲಿ ಹರಿಯುತ್ತಿದ್ದರೆ, ಖುದಿರಾಮ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ರಕ್ತವು ನಿಮ್ಮ ರಕ್ತನಾಳಗಳಲ್ಲಿ ಹಾದು ಹೋಗಿದ್ದರೆ, ನೀವು ನಿಮ್ಮ ಮಾತೃಭಾಷೆ ಮತ್ತು ಮಾತೃಭೂಮಿಯನ್ನು ಪ್ರೀತಿಸುತ್ತಿದ್ದರೆ, ನೀವೆಲ್ಲರೂ ‘ಏಕ್ ಬಿಹಾರಿ, ಸೌ ಬಿಮಾರಿ’ (ಒಬ್ಬ ಬಿಹಾರದ ವ್ಯಕ್ತಿ 100 ರೋಗಗಳಿಗೆ ಸಮಾನ) ಎಂದು ಜೋರಾಗಿ ಕೂಗಬೇಕು. ನಮಗೆ ರೋಗಗಳು ಬೇಡ. ಬಂಗಾಳವನ್ನು ರೋಗಮುಕ್ತಗೊಳಿಸಿ. ಜೈ ಬಾಂಗ್ಲಾ, ಜೈ ದೀದಿ ಮಮತಾ ಬ್ಯಾನರ್ಜಿ” ಎಂದು ಮನೋರಂಜನ್ ಬೈಪಾರಿ ಕೋಲ್ಕತ್ತಾ ಪುಸ್ತಕ ಮೇಳದಲ್ಲಿ ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಬಿಹಾರದಲ್ಲಿ ಎಲ್ಲವೂ ಸರಿಯಾಗಿದ್ದರೆ, ಬಿಹಾರಕ್ಕೆ ಹಿಂತಿರುಗಿ” ಎಂದು ಅವರು ಹೇಳುವುದು ಕೂಡ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿರುವ ತೃಣಮೂಲ ಕಾಂಗ್ರೆಸ್‌ನ ಮಾಜಿ ನಾಯಕ, ಹಾಲಿ ಬಿಜೆಪಿಯ ಸುವೇಂದು ಅಧಿಕಾರಿ ಟಿಎಂಸಿ ವಿರುದ್ಧ ಕಿಡಿ ಕಾರಿದ್ದಾರೆ.
ಈ ಮೊದಲು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಯವರು ಬಿಹಾರಿಗಳು ಮತ್ತು ಉತ್ತರ ಪ್ರದೇಶದವರನ್ನು ‘ಬೋಹಿರಾಗೋಟೋಸ್’ (ಹೊರಗಿನವರು) ಎಂದು ಲೇಬಲ್ ಮಾಡಿದ್ದರು. ಈಗ ಬಂಗಾಳವನ್ನು ಬಿಹಾರಿಗಳಿಂದ ಮುಕ್ತಗೊಳಿಸಲು ಕರೆ ನೀಡಿದ್ದಾರೆ” ಎಂದು ಸುವೇಂದು ಅಧಿಕಾರಿ ಟೀಕಿಸಿದ್ದಾರೆ.
ಬಿಜೆಪಿ ತೊರೆದು ಟಿಎಂಸಿ ಸೇರಿರುವ ಬಿಹಾರಿ ಬಾಬು ಶತ್ರುಘ್ನ ಸಿನ್ಹಾ ಅವರಿಗೆ ನನ್ನದೊಂದು ವಿನಮ್ರ ಪ್ರಶ್ನೆ. ಸರ್, ಟಿಎಂಸಿ ಶಾಸಕ ಮನೋರಂಜನ್ ಬ್ಯಾಪಾರಿಯ ಈ ಅವಮಾನಕರ ವಾಗ್ದಾಳಿ ಬಗ್ಗೆ ನಿಮಗೆ ಏನನಿಸುತ್ತದೆ? ನಿಮ್ಮ ಹೊಸ ಪಕ್ಷದ ನಾಯಕ ಬಿಹಾರಿಗಳ ಬಗ್ಗೆ ಈ ರೀತಿ ಮಾತನಾಡಿರುವುದು ಸರಿಯೇ? ಎಂದು ಸುವೇಂದು ಅಧಿಕಾರಿ ಟ್ವೀಟ್ ಮಾಡಿದ್ದಾರೆ.
ನಟ ಶತ್ರುಘ್ನ ಸಿನ್ಹಾ ಅವರಿಗೆ ಟಿಎಂಸಿಯಿಂದ ಈ ಬಾರಿ ಚುನಾವಣೆಗೆ ಟಿಕೆಟ್ ನೀಡಲಾಗಿದೆ. ಕಳೆದ ವರ್ಷದ ಬಂಗಾಳ ಚುನಾವಣೆಯಲ್ಲಿ ಹೂಗ್ಲಿಯಿಂದ ಗೆದ್ದಿದ್ದ ಬ್ಯಾಪಾರಿ ಮೊದಲ ಬಾರಿಗೆ ಟಿಎಂಸಿಯ ಶಾಸಕರಾಗಿದ್ದಾರೆ.
ತೃಣಮೂಲ ಕಾಂಗ್ರೆಸ್ ಅವರ ಹೇಳಿಕೆಗಳಿಂದ ಕಾಮೆಂಟ್‌ಗಳಿಂದ ದೂರ ಸರಿದಿದೆ. ತಾವು ಎಂದಿಗೂ ಇಡೀ ಸಮುದಾಯವನ್ನು ಗುರಿಯಾಗಿಸಲು ಉದ್ದೇಶಿಸಿರಲಿಲ್ಲ. ನಾನು ಸಮುದಾಯದ ಕೆಲವು ಜನರ ಬಗ್ಗೆ ಮಾತ್ರ ಮಾತನಾಡಿದ್ದೇನೆ” ಎಂದು ಎಂದು ಶಾಸಕ ಬೈಪಾರಿ ಹೇಳಿದ್ದಾರೆ.
ಅಧಿಕಾರಿ ಒಬ್ಬ ಪ್ರತಿಸ್ಪರ್ಧಿ, ಅವರು ನನ್ನನ್ನು ಗುರಿಯಾಗಿಸಿಕೊಂಡಿದ್ದಾರೆ. ಅವರು ನನ್ನನ್ನು ಕೆಳಗಿಳಿಸಲು ನನ್ನನ್ನು ಆಯ್ಕೆ ಮಾಡಿಕೊಂಡಿದ್ದಾರೆ” ಎಂದು ಬೈಪಾರಿ ಹೇಳಿದರು.
ನಾನು ಶತ್ರುಘ್ನ ಸಿನ್ಹಾ ಬಗ್ಗೆ ಏನನ್ನೂ ಹೇಳುವುದಿಲ್ಲ. ನಾನು ಬಂಗಾಳಿಗಳನ್ನು ಮತ್ತು ನಮ್ಮ ಸಂಸ್ಕೃತಿಯನ್ನು ಅವಮಾನಿಸುವವರನ್ನು ಮಾತ್ರ ಹೀಗೆ ಅರ್ಥೈಸುತ್ತೇನೆ ಎಂದು ಅವರು ಹೇಳಿದರು.
ಕಳೆದ ವರ್ಷ ಬಾಬುಲ್ ಸುಪ್ರಿಯೋ ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್ ಸೇರಿದ ನಂತರ ತೆರವಾಗಿದ್ದ ಅಸನ್ಸೋಲ್ ನಿಂದ ಶತ್ರುಘ್ನ ಸಿನ್ಹಾ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ