ಅಕ್ಷರ ಸೇವಕ ಮನೋಹರ ಗ್ರಂಥಮಾಲೆಯ ಡಾ. ರಮಾಕಾಂತ ಜೋಶಿಗೆ ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಗೌರವ-ಹಿಗ್ಗಿದ ಸಮ್ಮೇಳನದ ಹಿರಿಮೆ

(ಧಾರವಾಡ ಜಿಲ್ಲಾ ೧೪ನೇ ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡ ಆರ್.ಎನ್. ಶೆಟ್ಟಿ ಕ್ರಿಡಾಂಗಣದ ಹತ್ತಿರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ದಿನಾಂಕ ೨೬, ೨೭ ಮಾರ್ಚ ೨೦೨೨ರಂದು ನಡೆಯಲಿದ್ದು ಆ ನಿಮಿತ್ತ ಲೇಖನ)

ಧಾರವಾಡ ಜಿಲ್ಲಾ ೧೪ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಧಾರವಾಡದ ಮನೋಹರ ಗ್ರಂಥ ಮಾಲೆಯನ್ನು ಬಹುಎತ್ತರಕ್ಕೆ ಬೆಳೆಸಿದ ಗ್ರಂಥಮಾಲೆಗೆ ಹೊಸ ಆಯಾಮ ನೀಡಿದ ಡಾ.ರಮಾಕಾಂತ ಜೋಶಿಯವರು ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜೀವನದುದ್ದಕ್ಕೂ ಅಕ್ಷರ ಸೇವೆ ಮಾಡಿಕೊಂಡು ಬರುತ್ತಿರುವ ಡಾ.ರಮಾಕಾಂತ ಜೋಶಿಯವರು ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಮ್ಮೇಳನದ ಹಿರಿಮೆ ಹೆಚ್ಚಿಸಿದೆ.
“ತಂದೆಯಂತೆ ಮಗ, ಗುರುವಿನಂತ ಶಿಷ್ಯ” ಎಂಬ ನಾಣ್ಣುಡಿ ಇದ್ದು, ಅದನ್ನು ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದವರು ಧಾರವಾಡದ ಡಾ. ರಮಾಕಾಂತ ಜೋಶಿಯವರು. ತಂದೆಯವರಾದ ಗೋವಿಂದ ಜೋಶಿ (ಜಿ.ಬಿ.ಜೋಶಿ) ಮತ್ತು ಗುರುಗಳಾದ ಡಾ. ಕೀರ್ತಿನಾಥ ಕುರ್ತುಕೋಟಿ ಅವರ ಜೀವನ, ಸಮಯಪಾಲನೆ, ಶಿಸ್ತು, ಆದರ್ಶ, ತತ್ವ ನಿಷ್ಠೆ, ಪ್ರಾಮಾಣಿಕತೆ, ಸಂಪ್ರದಾಯ ಮುಂತಾದ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕನ್ನಡ ಪುಸ್ತಕೋದ್ಯಮ ಕ್ಷೇತ್ರಕ್ಕೆ ವಿಶಿಷ್ಟ ಅಡಿಪಾಯ ಹಾಕಿದವರು ಡಾ. ರಮಾಕಾಂತ ಜೋಶಿಯವರು.
೮೬ ವಯಸ್ಸಿನ ರಮಾಕಾಂತ ಅವರ (ಜನನ. ೨೩.೧೦.೧೯೩೬) ಜೀವನಾನುಭವ ಕೇಳುವುದೇ ಒಂದು ಸೌಭಾಗ್ಯ. ಧಾರವಾಡದಲ್ಲಿಯೇ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ, ೧೯೬೬ ರಲ್ಲಿ ಕರ್ನಾಟಕ ಕಲಾ ಮಹಾವಿದ್ಯಾಲಯದಿಂದ ಬಿ.ಎ. ಪದವಿ, ಗುಜರಾತದ ಸರದಾರ ಪಟೇಲ್ ವಿಶ್ವವಿದ್ಯಾಲಯದಿಂದ ೧೯೬೯ ರಲ್ಲಿ ಎಂ.ಎ. (ಇಂಗ್ಲೀಷ್‌) ಪದವಿ ಹಾಗೂ ೧೯೮೪ ರಲ್ಲಿ ಪಿ.ಎಚ್.ಡಿ. ಪದವಿಯನ್ನು ಪಡೆದಿದ್ದಾರೆ.
ಜುಲೈ ೧, ೧೯೬೯ ರಲ್ಲಿ ಧಾರವಾಡದ ಕಿಟಲ್ ಕಲಾ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್‌ ಉಪನ್ಯಾಕರಾಗಿ ಸೇವೆ ಆರಂಭಿಸಿ, ೩೧.೧೦.೧೯೯೪ರಂದು ನಿವೃತ್ತರಾದರು. ಸುದಿರ್ಘವಾದ ೩೬ ವರ್ಷಗಳ ಸೇವೆಯಲ್ಲಿ ಅಪಾರವಾದ ಶಿಷ್ಯರನ್ನು ನಾಡಿಗೆ ನೀಡಿದ್ದಾರೆ.
ರಮಾಕಾಂತ ಅವರಿಗೆ ಎಂಟನೇ ವರ್ಷದಿಂದಲೇ ತಂದೆಯವರೊಂದಿಗೆ ಪುಸ್ತಕದ ಒಡನಾಟ. ೧೯೩೩ರಲ್ಲಿ ಬೆಟಗೇರಿ ಕೃಷ್ಣಶರ್ಮರ (ಆನಂದಕಂದ) ರ ಸುದರ್ಶನ ಕಾದಂಬರಿಯ ಪ್ರಕಟನೆಯೊಂದಿಗೆ ಮನೋಹರ ಗ್ರಂಥಮಾಲೆ ಆರಂಭವಾಯಿತು. ಕಳೆದ ೮೯ ವರ್ಷಗಳಿಂದ ಈ ಸಂಸ್ಥೆ ಪುಸ್ತಕಗಳ ಪ್ರಕಟಣೆಗಳೊಂದಿಗೆ, ಕನ್ನಡ ಭಾಷೆ, ನಾಡು, ನುಡಿಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.ಉತ್ತರ ಕರ್ನಾಟಕದ ಅನೇಕ ಹಿರಿಯ-ಕಿರಿಯ ಲೇಖಕರು ಬರಹಗಾರು ತಮ್ಮ ಬರವಣಿಗೆಯ ಮೂಲಕ ಜನಜಾಗೃತಿಯಲ್ಲಿ ತೊಡಗಿದ್ದರು. ಅವರಲ್ಲಿ ಡಾ.ದ.ರಾ.ಬೇಂದ್ರೆ ಅವರು ಒಬ್ಬರು. ಅವರು ಗೆಳೆಯರ ಗುಂಪುನ್ನು ಸ್ಥಾಪಿಸಿದರು. ಈ ಗೆಳೆಯರ ಗುಂಪು ಧಾರವಾಡದಲ್ಲಿ ಇತಿಹಾಸ ನಿರ್ಮಿಸಿದೆಯಲ್ಲದೆ, ಇಂದಿಗೂ ಮನೋಹರ ಗ್ರಂಥಮಾಲೆಯ ಅಟ್ಟ ಎಂಬುದು ಹಲವಾರು ಪ್ರಮುಖ ನಿರ್ಧಾರಗಳ ತಾಣವಾಗಿದೆ. ಅಂದಿನ ಗೆಳೆಯರ ಗುಂಪು ಸಾಹಿತ್ಯಿಕವಾಗಿ ಮತ್ತು ಸಾಂಸ್ಕೃತಿಕವಾಗಿ ದೊಡ್ಡ ಹೆಸರನ್ನು ಮಾಡಿತ್ತು. “ಸ್ವಧರ್ಮ”, “ಜಯಕರ್ನಾಟಕ” ಮತ್ತು “ಜೀವನ ಪತ್ರಿಕೆಗಳು” ಗೆಳೆಯರ ಗುಂಪಿನ ಪತ್ರಿಕೆಗಳಾಗಿದ್ದವು. ಡಾ. ದ.ರಾ.ಬೇಂದ್ರೆ ಅವರು ಉದಯೋನ್ಮುಖ ಬರಹಗಾಗರಿಗೆ ಮಾರ್ಗದರ್ಶಕರಾಗಿದ್ದರು. ಆ ಗುಂಪಿನ ಸದಸ್ಯರೆಲ್ಲರೂ ನಂತರ ದಿನಮಾನಗಳಲ್ಲಿ ಪ್ರಖ್ಯಾತ ಲೇಖಕರಾದರು.
ಬೆಟಗೇರಿ ಕೃಷ್ಣಶರ್ಮ, ಜಿ.ಬಿ. ಜೋಶಿ (ಜಡಭರತ) ಮತ್ತು ಗೋವಿಂದ ಚುಳಕಿ ಅವರು ಗೆಳೆಯರ ಗುಂಪಿನ ಸದಸ್ಯರಾಗಿದ್ದರು. ನಾಡಹಬ್ಬ ಮತ್ತು ಮುಂತಾದ ಕರ‍ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದ ಗೆಳೆಯರ ಗುಂಪಿನ ಸಹಕಾರದಿಂದ ಮನೋಹರ ಗ್ರಂಥಮಾಲೆಯು ಮೊದಲ ವರ್ಷದಲ್ಲಿಯೇ ಆರು ಪುಸ್ತಕಗಳನ್ನು ಪ್ರಕಟಿಸಿತು. ಜಿ.ಬಿ. ಜೋಶಿ ಅವರೇ ತಮ್ಮ ಜೀವನದುದ್ದಕ್ಕೂ ಸಂಸ್ಥೆಯನ್ನು ಗಟ್ಟಿಯಾಗಿ ಬೆಳೆಸಿ, ಕನ್ನಡದ ಸತ್ವಶಾಲಿ ಪ್ರಕಾಶನದ ಸಂಸ್ಥೆಯನ್ನಾಗಿ ಮಾಡಿದರು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

ಡಾ.ದ.ರಾ.ಬೇಂದ್ರೆ, ಡಾ.ವಿ.ಕೃ.ಗೋಕಾಕ, ಡಾ.ರಂ.ಶ್ರೀ ಮುಗಳಿ ಅವರು ಈ ಸಂಸ್ಥೆಗೆ ಇಪ್ಪತ್ತೈದು ವರ್ಷಗಳ ಕಾಲ ಸಾಹಿತ್ಯ ಮಾರ್ಗದರ್ಶನ ನೀಡಿದರು. ನಂತರ ವಿದ್ವಾಂಸರಾದ ಡಾ.ಕೀರ್ತಿನಾಥ ಕುರ್ತುಕೋಟಿ ನಿರಂತರ ಮಾರ್ಗದರ್ಶನದ ಮೂಲಕ ಗ್ರಂಥಮಾಲೆಗೆ ಹೊಸ ಆಯಾಮ ನೀಡಿದ್ದಾರೆ. ಖ್ಯಾತ ನಾಟಕಕಾರರು ಮತ್ತು ಜ್ಞಾನಪೀಠ ಪುರಸ್ಕೃತ ಡಾ. ಗಿರೀಶ ಕಾರ್ನಾಡ ಮತ್ತು ವಿಮರ್ಶಕರಾಗಿದ್ದ ಡಾ.ಗಿರಡ್ಡಿ ಗೋವಿಂದರಾಜ ಅವರು ಸಾಹಿತ್ಯ ಸಲಹೆಗಾರರಾಗಿ ಗ್ರಂಥಮಾಲೆಯ ಕಾರ್ಯ ಚಟುವಟಿಕೆಗಳಿಗೆ ಪ್ರೇರಕರಾಗಿದ್ದಾರೆ. ಮನೋಹರ ಗ್ರಂಥಮಾಲೆಯು ಕಾದಂಬರಿ, ಕಾವ್ಯ, ನಾಟಕ, ಏಕಾಂಕ, ಜೀವನ ಚರಿತ್ರೆ, ದಿನಚರಿ, ಪ್ರವಾಸ ಸಾಹಿತ್ಯ, ಇತಿಹಾಸ, ಪ್ರಬಂಧ, ಹರಟೆ, ಆಧ್ಯಾತ್ಮ ಮುಂತಾದ ೫೦೦ ಕ್ಕೂ ಹೆಚ್ಚಿನ ಕೃತಿಗಳನ್ನು ಈವರೆಗೆ ಪ್ರಕಟಿಸಿದೆ.
ಉತ್ತಮ ಸಾಹಿತ್ಯ ಮತ್ತು ಉತ್ತಮ ಪ್ರಕಟಣೆಯ ಧ್ಯೇಯದೊಂದಿಗೆ ಕಾರ‍್ಯನಿರ್ವಹಿಸುತ್ತಿರುವ ಗ್ರಂಥಮಾಲೆ ಲಾಭ-ನಷ್ಟದ ವಿಚಾರ ಮಾಡದೇ ಗ್ರಂಥ ಪ್ರಕಟನೇಯಲ್ಲಿ ವಿಕ್ರಮ ಸಾಧಿಸುತ್ತಾ, ಮುನ್ನಡೆಯುತ್ತಿದೆ. ಕನ್ನಡ ಪುಸ್ತಕೋದ್ಯಮದಲ್ಲಿ ಚಂದಾ ಯೋಜನೆಯೊಂದಿಗೆ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಸಂಸ್ಥೆಯೆಂದೇ ಖ್ಯಾತವಾಗದೆ. ಮನೆ ಬಾಗಿಲಿಗೆ ಗ್ರಂಥಗಳನ್ನು ಮುಟ್ಟಿಸುತ್ತಿರುವ ಸಂಸ್ಥೆ ಓದುಗರಲ್ಲಿ ಹೊಸ ವಾತಾವರಣ ನಿರ್ಮಿಸಿದೆ.
ಶಿವರಾಮ ಕಾರಂತ, ಶ್ರೀರಂಗರು, ವಿ.ಕೃ.ಗೋಕಾಕ, ಕೆ. ಶಂಕರಭಟ್ಟ, ಶಂಕರ ಮೊಕಾಶಿ ಪುಣೇಕರ, ರಾವಬಹದ್ದೂರ, ಯು.ಆರ್. ಅನಂತಮೂರ್ತಿ, ಶ್ರೀಕೃಷ್ಣ ಅಲನಹಳ್ಳಿ, ನಾ.ಕಸ್ತೂರಿ, ರಾ.ಕು., ದ.ರಾ.ಬೇಂದ್ರೆ, ಕೀರ್ತಿನಾಥ ಕುರ್ತುಕೋಟಿ, ಜಡಭರತ, ಗಿರೀಶ ಕಾರ್ನಾಡ, ಚಂದ್ರಶೇಖರ ಕಂಬಾರ, ರಂ.ಶ್ರೀ. ಮುಗಳಿ, ಮಿರ್ಜಿ ಅಣ್ಣಾರಾಯ, ಮುಂತಾದ ಹಿರಿಯ, ಕಿರಿಯ ಸಾಹಿತಿಗಳ ಕೃತಿಗಳನ್ನು ಮನೋಹರ ಗ್ರಂಥಮಾಲೆ ಪ್ರಕಟಸಿದೆ.
ಸಂಸ್ಥೆ ಸಾಹಿತ್ಯೋತ್ಸವ, ಶಾರದೋತ್ಸವ, ಸಂಗೀತೋತ್ಸವ, ವಸಂತೋತ್ಸವ, ನಾಟಕೋತ್ಸವ, ವಿಚಾರ ಸಂಕಿರಣ, ಉಪನ್ಯಾಸ, ಚರ್ಚಾಗೋಷ್ಠಿ, ಪುಸ್ತಕಗಳ ಬಿಡುಗಡೆ, ಮುಂತಾದ ಕರ‍್ಯಕ್ರಮಗಳನ್ನು ಆಯೋಜಿಸುತ್ತಾ ಅಭಿಮಾನಗಳಲ್ಲಿ ಸಾಹಿತ್ಯಾಸಕ್ತರಲ್ಲಿ ಸಾಹಿತ್ಯಾಭಿರುಚಿ, ಬೆಳೆಸಲು ಸಹಾಯ ಮತ್ತು ಸೌಲಭ್ಯಗಳನ್ನು ಕಲ್ಪಿಸುತ್ತಾ ಬರುತ್ತಿದೆ. ಲೇಖಕರ ಹಸ್ತಾಕ್ಷರಗಳಲ್ಲಿ ಬರೆದ ಹಸ್ತ ಪ್ರತಿಗಳನ್ನು ಗ್ರಂಥಮಾಲೆಯಲ್ಲಿ ಸಂಗ್ರಹಿಸಲಾಗಿದೆಯಲ್ಲದೇ, ಲೇಖಕರ ಭಾವಚಿತ್ರಗಳನ್ನು ಸಂಗ್ರಹಿಸಿ, ದೇಶ ವಿದೇಶಗಳಲ್ಲಿ ಪ್ರದರ್ಶಿಸಲಾಗುತ್ತಿದೆ.

ಪ್ರಕಾಶಕ, ಸಂಪಾದಕ, ವ್ಯವಸ್ಥಾಪಕ, ಸಾಹಿತ್ಯ ಸಲಹೆಗಾರರಾಗಿ, ಲೇಖಕರಾಗಿ, ಅನುವಾದಕರ, ಮಾರ್ಗದರ್ಶಕರಾಗಿ ಕಾರ‍್ಯನಿರ್ವಹಿಸುತ್ತಿರುವ ಡಾ. ರಮಾಕಾಂತ ಜೋಶಿ ಅವರು ಚಿತ್ರಾ ಫಿಲ್ಮ್‌ ಸೊಸೈಟಿಯ ಕಾರ‍್ಯಕಾರಿ ಸಮಿತಿಯ ಸದಸ್ಯರಾಗಿ, ಧಾರವಾಡ ಕಲಾ ಕೇಂದ್ರದ ಕಾರ‍್ಯದರ್ಶಿಯಾಗಿ, ಕರ್ನಾಟಕ ಪ್ರಕಾಶಕರ ಸಂಘದ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ, ಕನ್ನಡ ಪುಸ್ತಕ ಪ್ರಾಧಿಕಾರರ ಸದಸ್ಯರಾಗಿ, ಭಾರತೀಯ ವಿದ್ಯಾಭವನದ ಸದಸ್ಯರಾಗಿ, ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟದ ಕಾರ‍್ಯದರ್ಶಿಯಾಗಿ, ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್ ಮತ್ತು ಪ್ರೊ. ವಿ.ಕೆ. ಗೋಕಾಕ ಟ್ರಸ್ಟ್‌ಗಳ ಟ್ರಸ್ಟಿಗಳಾಗಿ, ಕದರಮಂಡಲಗಿಯ ಶ್ರೀ ಕೇಸರಿ ನಂದನ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾಗಿ, ರಚನಾತ್ಮಕವಾದ ಕಾರ‍್ಯಗಳನ್ನು ಮಾಡುತ್ತಿದ್ದಾರೆ.
ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ೨೦ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿರುವ ರಮಾಕಾಂತ ಜೋಶಿಯವರು ಕನ್ನಡ ಪುಸ್ತಕೋದ್ಯಮ, ಲೇಖಕ, ಪ್ರಕಾಶಕರ ಸಂಬಂಧಗಳು, ಸಮಕಾಲೀನ ಭಾರತೀಯ ಇಂಗ್ಲೀಷ್‌ ಕಾರ‍್ಯ, ಗ್ರಂಥ ಸ್ವಾಮ್ಯ, ಅನುವಾದ ಮುಂತಾದ ವಿಷಯಗಳ ಮೇಲೆ ದೇಶ, ವಿದೇಶಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರಲ್ಲದೇ, ಅಕಾಶವಾಣಿಯಲ್ಲಿ ಚಿಂತನ, ಭಾಷಣ ಮತ್ತು ಸಂದರ್ಶನಗಳನ್ನು ನೀಡುತ್ತಾ ಮುನ್ನಡೆಯುತ್ತಿದ್ದಾರೆ.
ಮನೋಹರ ಗ್ರಂಥಮಾಲೆಗೆ ದೆಹಲಿ ಭಾರತೀಯ ಪ್ರಕಾಶಕರ ಒಕ್ಕೂಟದ “ವಿಶಿಷ್ಠ ಪ್ರಕಾಶಕ ಪ್ರಶಸ್ತಿ”, ಕನ್ನಡ ಭಾಷಾ ಪುಸ್ತಕ ಪ್ರಕಾಶನಕ್ಕೆ “ಆಳ್ವ ನುಡಿಸಿರಿ” ಪ್ರಶಸ್ತಿ, ಸಾಹಿತ್ಯ ಭಂಡಾರದ ‘ಅತ್ಯುತ್ತಮ ಪ್ರಕಾಶಕ ಪ್ರಶಸ್ತಿ”, ಕರ್ನಾಟಕ ಕನ್ನಡ ಬರಹಗಾರರ ಹಾಗೂ ಪ್ರಕಾಶಕರ ಸಂಘದ ‘೨೦೦೬ರ ವರ್ಷದ ಪ್ರಕಾಶಕ ಪ್ರಶಸ್ತಿ’, ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಗಾಗಿ ‘ಸಂದೇಶ’ ಪ್ರಶಸ್ತಿ, ‘ಕನಕದಾಸ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ‘ಅತ್ಯುತ್ತಮ ಪ್ರಕಾಶನ ಪ್ರಶಸ್ತಿ’ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಅತ್ಯುತ್ತಮ ಪ್ರಕಾಶಕ ಪ್ರಶಸ್ತಿ ಇವೇ ಮೊದಲಾದ ಪ್ರಶಸ್ತಿಗಳು ಸಂದಿವೆ.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

ಡಾ. ರಮಾಕಾಂತ ಜೋಶಿ ಅವರ ಅನಿಸಿಕೆಗಳು...

• ಪ್ರತಿ ಜಿಲ್ಲಾ ಕೇಂದ್ರಗಳಗಳಲ್ಲಿ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯಾಗಬೇಕು.
• ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಗ್ರಂಥಗಳ ಮೊದಲ ಆವೃತ್ತಿಯ ಪರಿಚಯಾತ್ಮಕ ಲೇಖನಗಳಿಗೆ ಆದ್ಯತೆ ನೀಡಬೇಕು.
• ಪುಸ್ತಕ ಮೇಳಗಳನ್ನು ನಿರಂತರ ಆಯೋಜಿಸಬೇಕು.
• ಗ್ರಂಥ ಸ್ವಾಮ್ಯ ನಿಯಮದಂತೆ ಗ್ರಂಥಗಳ ನೋಂದಣಿಯಾಗಬೇಕು ಮತ್ತು ಆ ಗ್ರಂಥಗಳ ವಿವರ ಸಾರ್ವಜನಿಕರಿಗೆ ತಲುಪಬೇಕು.
• ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಒಂದು ಗಂಟೆ ಗ್ರಂಥಾಲಯಕ್ಕೆ ಸೀಮಿತವಾಗಬೇಕು ಮತ್ತು ವಿದ್ಯಾರ್ಥಿಗಳು ಅವರ ಆಸಕ್ತಿಯೊಂದಿಗೆ ಓದುವ ವ್ಯವಸ್ಥೆ ಜಾರಿಯಾಗಬೇಕು.
• ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಭಾಷಾ ಬೋಧನೆ ಕಡ್ಡಾಯವಾಗಬೇಕು.
• ರಾಜ್ಯದಲ್ಲಿ ಕನ್ನಡ ಅಧಿಕೃತ ಭಾಷೆಯಾಗಬೇಕು.
• ಮಕ್ಕಳ ಸಾಹಿತ್ಯ ರಚನೆಯಾಗಬೇಕು.
• ೧೬ ಪುಟಗಳ ಕನ್ನಡ ಅಂಕಲಿಪಿಯನ್ನು ಸರಕಾರ ಎಲ್ಲರಿಗೂ ಉಚಿತವಾಗಿ ಹಂಚಬೇಕು.
• ಸಾರ್ವಜನಿಕ ಗ್ರಂಥಾಲಯಗಳಿಗೆ ಸಿಬ್ಬಂದಿ ನೇಮಕವಾಗಬೇಕು.
• ಸ್ವಯಂ ಪ್ರಕಾಶಕರಿಗೆ ಕಡಿಮೆ ಬೆಲೆಯಲ್ಲಿ ಕಾಗದ ದೊರೆಯಬೇಕು, ಇಲ್ಲವೆ ಅನುದಾನಗಳು ದೊರಯಲಿ.
• ಸಮಾಜಕ್ಕೆ ಉಪಯುಕ್ತವಾಗುವ ಗ್ರಂಥಗಳು ಕಡಿಮೆ ಬೆಲೆಯಲ್ಲಿ ಎಲ್ಲರಿಗೂ ದೊರೆಯುವಂತಾಗಬೇಕು.

ಮುಂಜಾನೆಯ ವೇಳೆಯಲ್ಲಿ ಕಿಟಲ್ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್‌ ಪ್ರಾಧ್ಯಾಪಕ ಹುದ್ದೆಯ ಕಾರ‍್ಯನಿರ್ವಹಿಸಿ, ಮಧ್ಯಾಹ್ನದಿಂದಲೇ ತಂದೆಯವರ ಪ್ರಕಾಶನ ಮತ್ತು ಪುಸ್ತಕ ಮಾರಾಟದಲ್ಲಿ ಆಸಕ್ತಿಯಿಂದ ಕಾರ‍್ಯನಿರ್ವಹಿಸಿದೆ ಎನ್ನುವ ರಮಾಕಾಂತ ಜೋಶಿ ಅವರು ಇಂದು ಲೇಖಕರು ಮತ್ತು ಪ್ರಕಾಶಕರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಸಂತಸ ವ್ಯಕ್ತ ಪಡಿಸುತ್ತಾರೆ. ಕಿಟಲ್ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರು, ಸಿಬ್ಬಂದಿ, ಸ್ನೇಹಿತರು, ಸಾಹಿತಿಗಳ ಒಡನಾಟ ಸ್ಮರಿಸುವ ಅವರು ಪತ್ನಿ ಶ್ರೀದೇವಿ, ಮಗ ಸಮೀರ, ಸೊಸೆ ಶ್ವೇತಾ ಮತ್ತು ಕುಟುಂಬದವರಿಂದಾಗಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕರ‍್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗಿದೆ ಎನ್ನುತ್ತಾರೆ. ಡಾ. ವಿ.ಟಿ. ನಾಯಕ, ಕೃಷ್ಣಾ ಜೋಶಿ, ಹರ್ಷಾ ಡಂಬಳ, ಹ.ವೆಂ. ಕಾಕಂಡಕಿ ಸೇರಿದಂತೆ ಅನೇಕರು ಡಾ. ರಮಾಕಾಂತ ಜೋಶಿ ಅವರ ನಿರಂತರ ಕಾರ್ಯ ಚಟುವಟಿಕೆಗಳು ಕಿರಿಯರಿಗೆ ಮಾದರಿಯಾಗಿವೆ ಎನ್ನುತ್ತಾರೆ.
ಹೊಸ ಪ್ರಕಾಶಕರಿಗೆ ಹೇರಳವಾದ ಅವಕಾಶಗಳು ಇದ್ದು, ಅವರು ನಿಶ್ಚಿತ ಉದ್ದೇಶದೊಂದಿಗೆ ಕರ‍್ಯಮಾಡಿ, ಕನ್ನಡ , ನಾಡು, ನುಡಿಯನ್ನು ಬೆಳೆಸಬೇಕೆನ್ನುತ್ತಾರೆ, ಡಾ. ರಮಾಕಾಂತ ಜೋಶಿಯವರು.
ಡಾ. ರಮಾಕಾಂತ ಜೋಶಿ ಅವರ ಮಾರ್ಗದರ್ಶನದಲ್ಲಿ ಅವರ ಮಗ ಸಮೀರ ಜೋಶಿ ಅವರು ಮನೋಹರ ಗ್ರಂಥಮಾಲೆಯ ಕಾರ‍್ಯಚಟುವಟಿಕೆಗಳನ್ನು ಹೊಸ ವಿನ್ಯಾಸಗಳೊಂದಿಗೆ ಓದುಗರಿಗೆ ತಲುಪಿಸುತ್ತಿದ್ದಾರೆ.
ಅಧ್ಯಯನದ ಶೀಲರು, ನಾಡು,ನುಡಿಯ ರಕ್ಷಕರು, ಸರಸ್ವತಿಯ ಆರಾಧಕರು ಮತ್ತು ಸಾಹಿತ್ಯ ಪ್ರಸಾರಕರಾದ ಡಾ. ರಮಾಕಾಂತ ಜೋಶಿ ಅವರು ಕನ್ನಡ ಪುಸ್ತಕೋದ್ಯಮದ ಬೆಳವಣಿಗೆಯಲ್ಲಿ ಒಬ್ಬರಾಗಿದ್ದು, ಧಾರವಾಡ ಜಿಲ್ಲಾ ೧೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಒಂದು ಯೋಗಾಯೋಗ.

-ಡಾ. ಬಿ.ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು, ಹುಬ್ಬಳ್ಳಿ

3.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement