ನಾನು ಸ್ವಾಮೀಜಿಗಳಿಗೆ ಅಗೌರವ ತೋರಿಲ್ಲ, ನನ್ನ ಹೇಳಿಕೆ ತಿರುಚಿ ಅಪಪ್ರಚಾರ: ಸಿದ್ದರಾಮಯ್ಯ ಸ್ಪಷ್ಟನೆ

ಮೈಸೂರು: ನಮ್ಮ ತಾಯಂದಿರು ಸೇರಿದಂತೆ ಸಾಮಾನ್ಯವಾಗಿ ಎಲ್ಲರೂ ತಲೆಮೇಲೆ ಬಟ್ಟೆ ಹಾಕಿಕೊಳ್ಳುತ್ತಾರೆ ಎಂದು ಹೇಳಿದ್ದೇನೆಯೇ ಹೊರತು ಸ್ವಾಮೀಜಿಗಳಿಗೆ ಅಗೌರವ ತೋರಿಲ್ಲ. ಅನಗತ್ಯವಾಗಿ ನನ್ನ ಹೇಳಿಕೆ ತಿರುಚಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದಾರೆ.
ಶುಕ್ರವಾರ ಬೆಳಿಗ್ಗೆ ಸಿದ್ದರಾಮನಹುಂಡಿಯಲ್ಲಿ ನೀಡಿದ ಹೇಳಿಕೆ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಣಿ ಟ್ವೀಟ್​ ಮಾಡಿ ಸ್ಪಷ್ಟನೆ ನೀಡಿದ್ದಾರೆ.

ಎಲ್ಲ ಜಾತಿಯ ಸ್ವಾಮೀಜಿಗಳ ಬಗ್ಗೆ ನನಗೆ ಗೌರವವಿದೆ. ದೀರ್ಘಕಾಲದಿಂದ ನನಗೆ ಅವರ ಜೊತೆ ಹಾರ್ದಿಕ ಸಂಬಂಧ ಇದೆ. ಯಾವ ಸ್ವಾಮೀಜಿಗಳ ಬಗ್ಗೆಯೂ, ಯಾವಾಗಲೂ ನಾನು ಅಗೌರವದಿಂದ ನಡೆದುಕೊಂಡಿಲ್ಲ‌ ಎನ್ನುವುದು ರಾಜ್ಯದ ಜನತೆಗೆ ಗೊತ್ತಿದೆ. ರಾಜಕೀಯ ವಿರೋಧಿಗಳು ದುರುದ್ದೇಶದಿಂದ ನನ್ನ ಹೇಳಿಕೆಯನ್ನು ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಕೆಲವು ಮಾಧ್ಯಮಗಳು‌ ಕೂಡಾ ಸಾಥ್ ನೀಡಿರುವುದು‌ ವಿಷಾದನೀಯ. ನನ್ನ ಹೇಳಿಕೆಯನ್ನು ತಿರುಚಿರುವುದು ರಾಜ್ಯದ ಪ್ರಮುಖ ಮಠಗಳ ಹಿರಿಯ ಸ್ವಾಮೀಜಿಗಳಿಗೆ ಅರ್ಥವಾಗಿರುವ ಕಾರಣಕ್ಕಾಗಿಯೇ ಅವರು ಮೌನವಾಗಿದ್ದಾರೆ. ಅವರೆಲ್ಲರಿಗೂ ನನ್ನ ಕೃತಜ್ಞತಾಪೂರ್ವಕ ನಮನಗಳು ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ.

ಮುಸ್ಲಿಂ ಹೆಣ್ಣು ಮಕ್ಕಳು ಒಂದು ದುಪಟ್ಟಾ ತಲೆ ಮೇಲೆ ಹಾಕಿಕೊಳ್ಳುತ್ತೇನೆ ಎಂದರೆ ಅದರಲ್ಲಿ ತಪ್ಪೇನು. ಹಿಂದೂ ಹೆಣ್ಣು ಮಕ್ಕಳು ತಲೆಯ ಮೇಲೆ ಬಟ್ಟೆ ಹಾಕಿಕೊಳ್ಳುವುದಿಲ್ಲವೇ, ಸ್ವಾಮೀಜಿಗಳು ತಲೆಯ ಮೇಲೆ ಬಟ್ಟೆ ಹಾಕಿಕೊಳ್ಳುತ್ತಾರೆ. ಅದನ್ನ ನೀವು ಪ್ರಶ್ನೆ ಮಾಡುತ್ತೀರಾ? ಎಂದು ಇಂದು ಬೆಳಿಗ್ಗೆ ಸಿದ್ದರಾಮನಹುಂಡಿಯಲ್ಲಿ ಸಿದ್ದರಾಮಯ್ಯ ಪ್ರಶ್ನಿಸಿದ್ದರು. ಆ ಬಳಿಕ ಬಿಜೆಪಿಯ ಕೆಲ ನಾಯಕರು ಹಾಗೂ ಕೆಲ ಸ್ವಾಮೀಜಿಗಳು ಸಿದ್ದರಾಮಯ್ಯ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement