ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗದು; ಗ್ರಾಪಂ ಸದಸ್ಯೆ ಆಯ್ಕೆ ಅಸಿಂಧು ತೀರ್ಪು ಎತ್ತಿ ಹಿಡಿದ ಹೈಕೋರ್ಟ್‌

ಬೆಂಗಳೂರು: ಮದುವೆಯ ನಂತರ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗುವುದಿಲ್ಲ ಎಂದು ಈಚೆಗೆ ಆದೇಶಿಸಿರುವ ಕರ್ನಾಟಕ ಹೈಕೋರ್ಟ್, ತಂದೆ ಜಾತಿಯನ್ನು ಜನ್ಮದ ಆಧಾರ ಮೇಲೆ ಮಕ್ಕಳು ಪಡೆಯುತ್ತಾರೆ ಎಂದು ಸ್ಪಷ್ಟಪಡಿಸಿದೆ.
ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ಮದುವೆಯಾದ ಆಧಾರದ ಮೇಲೆ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಸ್ಥಾನದಿಂದ ಸ್ಪರ್ಧಿಸಿ ಜಯಗಳಿಸಿದ್ದ ಶಿವಮೊಗ್ಗದ ಬಾಳೆಕೊಪ್ಪ ನಿವಾಸಿ ಎಂ. ಜಿ. ಅರ್ಚನಾ ಅವರ ಆಯ್ಕೆಯನ್ನು ಅಸಿಂಧುಗೊಳಿಸಿದ್ದ ಅಧೀನ ನ್ಯಾಯಾಲಯದ ತೀರ್ಪನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ಹೈಕೋರ್ಟ್‌ ಪೀಠ ಎತ್ತಿ ಹಿಡಿದಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.

ತಾನು ಪರಿಶಿಷ್ಟ ಪಂಗಡದ ವ್ಯಕ್ತಿಯೊಂದಿಗೆ ಮದುವೆಯಾಗಿರುವ ಕಾರಣ ಪತಿಯ ಜಾತಿಯೇ ತನಗೆ ಅನ್ವಯಿಸುತ್ತದೆ ಎಂದು ಅರ್ಚನಾ ವಾದಿಸಿದ್ದಾರೆ. ಸಾಮಾನ್ಯವಾಗಿ, ವ್ಯಕ್ತಿಯ ಜನ್ಮದಿಂದ ಜಾತಿ ನಿರ್ಧರಿಸಲಾಗುತ್ತದೆ. ತಂದೆ ಜಾತಿಯನ್ನು ಜನ್ಮದ ಆಧಾರ ಮೇಲೆ ಮಕ್ಕಳು ಪಡೆಯುತ್ತಾರೆ. ವಿವಾಹದ ಬಳಿಕ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗುವುದಿಲ್ಲ. ಹೀಗಾಗಿ, ಪರಿಶಿಷ್ಟ ಜಾತಿ ಅಥವಾ ಪಂಗಡದಲ್ಲಿ ಜನಿಸಿದವರು ಮಾತ್ರ ಆ ಜಾತಿಗೆ ಮೀಸಲು ಆಗಿರುವ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬಹುದಾಗಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಪ್ರಮುಖ ಸುದ್ದಿ :-   ಕುಮಟಾ : ಕಣ್ಣುಗಳನ್ನು ದಾನ ಮಾಡಿ ಸಾವಿನ ನಂತರವೂ ಸಾರ್ಥಕ್ಯದ ಕಾರ್ಯ

ಪ್ರಕರಣದ ಹಿನ್ನೆಲೆ: ಅರ್ಚನಾ ಜನ್ಮತಃ ಪರಿಶಿಷ್ಟ ಪಂಗಡಕ್ಕೆ ಸೇರಿದವರಲ್ಲ. ಆದರೆ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ವಿವಾಹವಾಗಿದ್ದರು. ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಕ್ಷೇತ್ರದಿಂದ ಕಳೆದ ವರ್ಷ ನಡೆದಿದ್ದ ಗ್ರಾಪಂ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿ ಜಯಗಳಿಸಿದ್ದರು. ಇದರಿಂದ ಅವರ ಆಯ್ಕೆ ಅಸಿಂಧುಗೊಳಿಸುವಂತೆ ಕೋರಿ ಚುನಾವಣಾ ತಕರಾರು ನ್ಯಾಯಾಧಿಕರಣಕ್ಕೆ ಅಭಿಲಾಷ ಎಂಬುವರು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ಪುರಸ್ಕರಿಸಿದ ಶಿವಮೊಗ್ಗದ 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು, ಅರ್ಚನಾ ಆಯ್ಕೆ ಅನೂರ್ಜಿತಗೊಳಿಸಿ 2022ರ ಫೆಬ್ರವರಿ 1ರಂದು ಆದೇಶಿಸಿದ್ದರು. ಅದನ್ನು ಪ್ರಶ್ನಿಸಿ ಅರ್ಚನಾ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement