ಬಿಜೆಪಿ ಚುನಾವಣಾ ಗೆಲುವಿಗೆ ಸಿಹಿ ಹಂಚಿ ‘ಜೈ ಶ್ರೀ ರಾಮ್’ ಘೋಷಣೆ ಕೂಗಿದ್ದಕ್ಕಾಗಿ ನೆರೆಹೊರೆಯವರಿಂದ ವ್ಯಕ್ತಿಯ ಹತ್ಯೆ..!

ಕುಶಿನಗರ: ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಬೆಂಬಲಿಸಿದ್ದಕ್ಕಾಗಿ ಮತ್ತು ರಾಜ್ಯದಲ್ಲಿ ಪಕ್ಷದ ಚುನಾವಣಾ ಗೆಲುವಿನ ನಂತರ ಸಿಹಿ ಹಂಚಿದ್ದಕ್ಕಾಗಿ ಆತನ ನೆರೆಹೊರೆಯವರು ಅವರನ್ನು ಹತ್ಯೆಗೈದಿದ್ದಾರೆ ಎಂದು ಆರೋಪಿಸಲಾಗಿದೆ.
ಮೃತ ವ್ಯಕ್ತಿಯನ್ನು ಬಾಬರ್ ಎಂದು ಗುರುತಿಸಲಾಗಿದ್ದು, ಕುಶಿನಗರದ ರಾಮ್‌ಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯ ಕತ್‌ಗರ್ಹಿ ಗ್ರಾಮದ ನಿವಾಸಿ. ಮಾರ್ಚ್ 20 ರಂದು ಈ ಘಟನೆ ನಡೆದಿದ್ದು, ತನ್ನ ಅಂಗಡಿಯಿಂದ ಹಿಂತಿರುಗುತ್ತಿದ್ದ ಬಾಬರ್ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಿದ ಕಾರಣ ಆತನ ನೆರೆಹೊರೆಯವರು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಬಾಬರ್ ಅವರ ಪತ್ನಿ ಫಾತಿಮಾ ಅವರ ಪ್ರಕಾರ, ಅವರ ಪತಿ ತನ್ನ ಜೀವವನ್ನು ಉಳಿಸಿಕೊಳ್ಳಲು ತನ್ನ ಮನೆಯ ಛಾವಣಿ ಮೇಲೆ ಓಡಿಹೋದರು ಆದರೆ ಆರೋಪಿಗಳು ಹಿಂಬಾಲಿಸಿ ಅಲ್ಲಿಂದ ಅವರನ್ನು ಎಸೆದರು.
ಕುಟುಂಬದವರು ಬಾಬರ್‌ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿಂದ ಅವರನ್ನು ಜಿಲ್ಲಾ ಆಸ್ಪತ್ರೆಗೆ ಮತ್ತು ನಂತರ ಲಕ್ನೋಗೆ ಕರೆದೊಯ್ಯಲಾಯಿತು ಎಂದು ಬಾಬರ್‌ನ ತಾಯಿ ಜೆಬುನ್ನಿಸಾ ಹೇಳಿದರು. ಲಕ್ನೋದಲ್ಲಿ ಚಿಕಿತ್ಸೆ ವೇಳೆ ಬಾಬರ್ ಸಾವಿಗೀಡಾಗಿದ್ದಾರೆ.
ಬಾಬರ್‌ನ ಕುಟುಂಬದ ಪ್ರಕಾರ, ಬಾಬರ್ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದ ಕಾರಣ ಅವರ ನೆರೆಹೊರೆಯವರು ಅಸಮಾಧಾನಗೊಂಡಿದ್ದರು. ಮಾರ್ಚ್ 10 ರಂದು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿದ ನಂತರ, ಬಾಬರ್ ತನ್ನ ಪ್ರದೇಶದಲ್ಲಿ ಸಿಹಿ ಹಂಚಿದ್ದರು ಎಂದು ಅವರ ಕುಟುಂಬ ಹೇಳಿಕೊಂಡಿದೆ. ಬಿಜೆಪಿಯನ್ನು ಬೆಂಬಲಿಸದಿರುವಂತೆ ಬಗ್ಗೆ ಅವರ ನೆರೆಹೊರೆಯವರು ಪದೇ ಪದೇ ಎಚ್ಚರಿಕೆ ನೀಡಿದ್ದರು ಎಂದು ಕುಟುಂಬ ಹೇಳಿಕೊಂಡಿದೆ.

ಪ್ರಮುಖ ಸುದ್ದಿ :-   ಖರ್ಗೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಪಾಸಣೆ: ಚುನಾವಣಾಧಿಕಾರಿಗಳ ವಿರುದ್ಧ ಕಾಂಗ್ರೆಸ್‌ ಕಿಡಿ

ನೆರೆಹೊರೆಯವರು ಬಾಬರ್‌ಗೆ ಬೆದರಿಕೆ ಹಾಕಿದ ನಂತರ ನಾವು ರಾಮಕೋಲಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದೇವೆ ಎಂದು ಬಾಬರ್‌ನ ಕುಟುಂಬ ಹೇಳಿಕೊಂಡಿದೆ. ಆದರೆ, ಅಧಿಕಾರಿಗಳು ತಮ್ಮ ಮನವಿಯನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಕುಟುಂಬದವರು ದೂರಿದ್ದಾರೆ.
ಬಾಬರ್ ಸಾವಿನ ನಂತರ ಪತ್ನಿ ಫಾತಿಮಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅದರ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ.
ಸ್ಥಳಕ್ಕಾಗಮಿಸಿದ ಉಪವಿಭಾಗಾಧಿಕಾರಿ ವರುಣ್ ಕುಮಾರ್ ಪಾಂಡೆ, ಪ್ರಕರಣದಲ್ಲಿ ತಪ್ಪಿತಸ್ಥರನ್ನು ಬಂಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕುಶಿನಗರ ಶಾಸಕ ಪಿ.ಎನ್. ಪಾಠಕ್ ಅವರು ಬಾಬರ್ ಕುಟುಂಬವನ್ನು ಭೇಟಿಯಾಗಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಭರವಸೆ ನೀಡಿದರು. ಮೃತನ ಅಂತಿಮ ಸಂಸ್ಕಾರದಲ್ಲೂ ಪಾಲ್ಗೊಂಡಿದ್ದರು.

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement