ಕಮೀಷನ್ ಆರೋಪ : ಮಾನನಷ್ಟ ಮೊಕದ್ದಮೆ ಹೂಡ್ತೇನೆ ಎಂದ ಸಚಿವ ಈಶ್ವರಪ್ಪ

ಬೆಂಗಳೂರು: ತಮ್ಮ ಮೇಲೆ ಕಮಿಶನ್‌ ಆರೋಪ ಮಾಡಿರುವ ವ್ಯಕ್ತಿಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ವ್ಯಕ್ತಿ ಯಾರೆಂಬುದು ಗೊತ್ತಿಲ್ಲ. ಆದರೂ ನಮ್ಮ ಕಡೆಯವರು ಯಾರೋ ಕಮೀಷನ್ ಕೇಳಿದ್ದಾರೆ ಎಂಬ ಆರೋಪ ಮಾಡಿ ದೆಹಲಿಯಲ್ಲಿ ದೂರು ಕೊಟ್ಟಿದ್ದಾರೆ. ಇದರ ಹಿಂದೆ ಯಾವುದೋ ಷಡ್ಯಂತ್ರವಿದೆ ಎಂದು ಆರೋಪಿಸಿದರು.
ಪಂಚಾಯತ್‍ರಾಜ್ ಇಲಾಖೆಯಿಂದ ಆ ವ್ಯಕ್ತಿಗೆ ಯಾವುದೇ ಕಾರ್ಯಾದೇಶ ನೀಡಿಲ್ಲ. ಆದರೂ ಕಮೀಷನ್ ಆರೋಪ ಮಾಡಿ ನಮ್ಮ ಪಕ್ಷದ ನಾಯಕರಿಗೆ, ಕೇಂದ್ರದ ನಾಯಕರಿಗೆ ಪತ್ರ ಬರೆದಿದ್ದಾರೆ ಎಂದು ಕಾಂಗ್ರೆಸ್ ಸಂಸದರು ದೆಹಲಿಯಲ್ಲಿ ಆರೋಪಿಸಿದ್ದಾರೆ. ಆ ವ್ಯಕ್ತಿ ಯಾರೆಂಬುದು ಬೆಳಗಾವಿ ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೂ ಗೊತ್ತಿಲ್ಲ ಎಂದು ಹೇಳಿದರು.
ಆ ವ್ಯಕ್ತಿಯಿಂದ ಕೆಲಸವೇ ಮಾಡಿಸಿಲ್ಲ ಎಂದ ಮೇಲೆ ಹಣ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಮ್ಮ ವಕೀಲರು ಮಾನನಷ್ಟ ಮೊಕದ್ದಮೆ ಸಂಬಂಧಿಸಿದಂತೆ ಅವರಿಗೆ ನೋಟಿಸ್ ನೀಡಲಿದ್ದಾರೆ. ಆ ವ್ಯಕ್ತಿ ಮಾಡಿರುವ ಆರೋಪಕ್ಕೂ ನಮ್ಮ ಇಲಾಖೆಗೂ ಸಂಬಂಧವಿಲ್ಲ ಎಂದರು.
ಗ್ರಾಮೀಣಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಸ್ಪಷ್ಟೀಕರಣ ನೀಡಿದ್ದು, ಯಾವುದೇ ಆಡಳಿತಾತ್ಮಕ ಅನುಮೋದನೆ ನೀಡಿಲ್ಲ. ಯಾವುದೇ ಯೋಜನೆ ಕೂಡ ಮಂಜೂರು ಕೂಡ ಮಾಡಿಲ್ಲ. ಆಡಳಿತಾತ್ಮಕ ಮತ್ತು ತಾಂತ್ರಿಕ ಮಂಜೂರಾತಿಯೂ ಆಗಿಲ್ಲ. ಕಾರ್ಯಾದೇಶವೂ ನೀಡಿಲ್ಲ. ಹೀಗಿರುವಾಗ ಆರೋಪ ಹೇಗೆ ಮಾಡಿದರು? ಹೀಗಾಗಿ ಕಾಂಗ್ರೆಸ್ ಸಂಸದರು ಆರೋಪ ಮಾಡಿರುವುದರಲ್ಲಿ ಹುರುಳಿಲ್ಲ. ಕಮೀಷನ್ ಬಗ್ಗೆ ಮಾತನಾಡಿದ್ದಾರೆ. ಆಡಳಿತ ನಡೆಸಿದವರಿಗೆ ಕಾರ್ಯಾದೇಶವಿಲ್ಲದೆ ಕೆಲಸ ಹೇಗೆ ಮಾಡುತ್ತಾರೆ ? ಕಮೀಷನ್ ಆರೋಪ ಹೇಗೆ ಬರುತ್ತದೆ ಎಂಬುದು ಗೊತ್ತಾಗಲಿಲ್ಲವೇ ಎಂದು ಪ್ರಶ್ನಿಸಿದರು.
ಇದನ್ನು ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಕಾನೂನು ಸಚಿವರ ಗಮನಕ್ಕೆ ತಂದಿರುವುದಾಗಿ ತಿಳಿಸಿದರು.

ಪ್ರಮುಖ ಸುದ್ದಿ :-   ನಾಳೆ (ಮೇ 9) ಎಸ್‌ ಎಸ್‌ ಎಲ್‌ ಸಿ ಫಲಿತಾಂಶ ಪ್ರಕಟ ; ಫಲಿತಾಂಶ ಎಲ್ಲಿ ನೋಡುವುದು..? ಇಲ್ಲಿದೆ ಮಾಹಿತಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement