ಚಿಕ್ಕಮಗಳೂರು: ಶಿವಮೊಗ್ಗದಲ್ಲಿ 2015ರಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಹಿಂದೂ ಕಾರ್ಯಕರ್ತ ವಿಶ್ವನಾಥ್ ಶೆಟ್ಟಿ ಅವರ ಮಗ ಯಶಸ್ ನ ಓದಿನ ಜವಾಬ್ದಾರಿಯನ್ನು ಇತ್ತೀಚೆಗೆ ಕೊಲೆಯಾದ ಬಜರಂಗದಳದ ಕಾರ್ಯಕರ್ತ ಹರ್ಷನ ಸಹೋದರಿ ವಹಿಸಿಕೊಂಡಿದ್ದಾರೆ.
ಯಶಸ್ ವಾಸವಿರುವ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದ ಆತನ ಅಜ್ಜಿ ಮನೆಗೆ ಭೇಟಿ ನೀಡಿದ ಹರ್ಷ ಸಹೋದರಿ ಅಶ್ವಿನಿ, ಆತನ ಓದಿನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಅಲ್ಲದೆ, ಅಜ್ಜಿಯ ಜವಾಬ್ದಾರಿಯನ್ನೂ ವಹಿಸಿಕೊಳ್ಳುತ್ತೇನೆ. ಅವರಿಗೆ ಇತರ ಏನೇ ಸಮಸ್ಯೆ ಇದ್ದರೂ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಸಮಸ್ಯೆ ಇದ್ದಾಗ ಕರೆ ಮಾಡಿ ಎಂದೂ ಹೇಳಿದ್ದಾರೆ.
ಯಶಸ್ ಪ್ರಸ್ತುತ ಮೃತ ವಿಶ್ವನಾಥ ಶೆಟ್ಟಿ ಅವರ ಪತ್ನಿಯ ತಾಯಿಯೊಂದಿಗೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದಲ್ಲಿ ವಾಸಿಸುತ್ತಿದ್ದು, 8ನೇ ತರಗತಿ ಓದುತ್ತಿದ್ದಾನೆ. 2015ರ ಫೆಬ್ರವರಿ 19 ರಂದು ಶಿವಮೊಗ್ಗದಲ್ಲಿ ನಡೆದ ಪಿಎಫ್‍ಐ ಸಮಾವೇಶ ಮುಗಿಸಿಕೊಂಡು ಹೋಗುವಾಗ ಶಿವಮೊಗ್ಗ ತಾಲೂಕಿನ ಗಾಜನೂರು ಸಮೀಪ ದುಷ್ಕರ್ಮಿಗಳು ವಿಶ್ವನಾಥ್ ಶೆಟ್ಟಿಯನ್ನು ಕೊಲೆ ಮಾಡಿದ್ದರು. ವಿಶ್ವನಾಥ್ ಶೆಟ್ಟಿ ಸಾವಿನ ಕೆಲ ತಿಂಗಳ ಬಳಿಕ ಪತ್ನಿ ಕೂಡ ಮೃತಪಟ್ಟಿದ್ದರು. ವಿಶ್ವನಾಥ್ ಶೆಟ್ಟಿಯ ಮಗ ಯಶಸ್ ಅಪ್ಪ-ಅಮ್ಮ ಇಬ್ಬರೂ ಇಲ್ಲದೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿ ಅಜ್ಜಿಯ ಜೊತೆ ವಾಸವಿದ್ದಾನೆ.
ನಿಮ್ಮ ಕಾಮೆಂಟ್ ಬರೆಯಿರಿ